ಕಾರ್ಕಳ: ವಿಶ್ವದಲ್ಲೇ ಅತ್ಯಂತ ಬಲಿಷ್ಠ ಹಾಗೂ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಹೊಂದಿರುವ ನಮ್ಮ ದೇಶವು ನಮ್ಮೊಳಗಿನ ಭೇದಭಾವ ಮರೆತು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಚಿಂತನೆ ನಮ್ಮದಾಗಬೇಕು ಆ ಮೂಲಕ ರಾಷ್ಟ್ರೀಯತೆ ಹಾಗೂ ಸಂವಿಧಾನದ ಆಶಯಗಳನ್ನು ಪಾಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಕಾರ್ಕಳ ತಾಲೂಕು ತಹಶೀಲ್ದಾರ್ ಅನಂತಶಂಕರ ಹೇಳಿದರು.
ಅವರು ಕಾರ್ಕಳ ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಗಾಂಧಿಮೈದಾನದಲ್ಲಿ ನಡೆದ 76 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ಸಾಕಾರವಾಗಬೇಕಾದರೆ ಅಹಿಂಸೆ,ತ್ಯಾಗ, ಸತ್ಯ ಸದಾಚಾರಗಳಂತಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಾಮಾಜಿಕ ಪಿಡುಗುಗಳಾದ ಜಾತಿ, ಧರ್ಮ ಭೇದ,ವರದಕ್ಷಿಣೆ, ಅನಕ್ಷರತೆಯ ವಿರುದ್ಧ ಹೋರಾಡಿ ಸದೃಢ ರಾಷ್ಟ್ರವನ್ನು ಕಟ್ಟಲು ಶ್ರಮಿಸಬೇಕಿದೆ ಅಲ್ಲದೇ ಪರಧರ್ಮ ಸಹಿಷ್ಣುತೆ ಜತೆಗೆ ಕೋಮು ಸಾಮರಸ್ಯವನ್ನು ಕಾಪಾಡುವ ನಾವೆಲ್ಲರೂ ಭಾರತೀಯರು ಎಂಬ ನೆಲೆಗಟ್ಟಿನಲ್ಲಿ ಸಹಬಾಳ್ವೆ ನಡೆಸಬೇಕಿದೆ ಎಂದು ಕರೆ ನೀಡಿದರು.
ಈ ಶಾಸಕ ಸುನಿಲ್ ಕುಮಾರ್,ಡಿವೈಎಸ್ಪಿ ಅರವಿಂದ ಕಲಗುಜ್ಜಿ, ತಾ.ಪಂ ಇಒ ಗುರುದತ್ ಎಂ.ಎನ್, ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ,ವೃತ ನಿರೀಕ್ಷಕ ನಾಗರಾಜ ಟಿ.ಡಿ ಮುಂತಾದವರು ಉಪಸ್ಥಿತರಿದ್ದರು.
ಅಜೆಕಾರು ಪೊಲೀಸ್ ಠಾಣೆಯ ಠಾಣಾಧಿಕಾರಿ ರವಿ ಕಾರಗಿ ಧ್ವಜವಂದನೆ ನೆರವೇರಿಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳಿಗೆ ಪುರಸಭಾ ಸದಸ್ಯ ಶುಭದರಾವ್ ಸೇನಾ ಸಮವಸ್ತ್ರ ಧರಿಸಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸುತ್ತಿರುವ ದೃಶ್ಯ ಕಂಡುಬಂತು.