ಸುರತ್ಕಲ್: ಸುರತ್ಕಲ್‌ನ ವಿದ್ಯಾದಾಯಿನೀ ಶಾಲಾ ಮುಂಭಾಗದಲ್ಲಿರುವ ಸೌತ್ ಇಂಡಿಯನ್ ಬ್ಯಾಂಕ್‌ನ ಶಾಖಾ ಕಚೇರಿ ಪಕ್ಕದ ಇದೇ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ಜೆಸಿಬಿ ಬಳಸಿ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ 2 ಗಂಟೆಗೆ ನಡೆದಿದೆ.
ಕಳ್ಳತನ ಯತ್ನದ ವೇಳೆ ಸಕಾಲದಲ್ಲಿ ಬ್ಯಾಂಕ್ ಸೈರನ್ ಮೊಳಗಿದ್ದರಿಂದ ಜೆಸಿಬಿ ಸಹಿತ ಕಳ್ಳರು ಪರಾರಿ ಯಾಗಿದ್ದರೂ, ಸಿಕ್ಕಿ ಬೀಳುವ ಭೀತಿಯಿಂದ ಜೋಕಟ್ಟೆ ಬಳಿ ಕೃತ್ಯಕ್ಕೆ ಬಳಸಿದ ಜೆಸಿಬಿಯನ್ನು ಬಿಟ್ಟು ಹೋಗಿದ್ದಾರೆ. ಕಳೆದ ಎರಡು ದಿನದ ಹಿಂದೆ ಪಡುಬಿದ್ರಿಯಲ್ಲಿ ಜೆಸಿಬಿ ಕಳವು ಮಾಡಿದ ಜೆಸಿಬಿ ಇದೆಂದು ತಿಳಿದು ಬಂದಿದೆ.
ಸುರತ್ಕಲ್‌ನ ವಿದ್ಯಾದಾಯಿನಿ ಹೆದ್ದಾರಿ ಒಂದು ಬದಿ ವಾಣಿಜ್ಯ ಕಟ್ಟಡಗಳು ಮಾತ್ರ ಇದ್ದು ,ಇನ್ನೊಂದು ಬದಿ ಶಾಲಾ ವಠಾರವಿದೆ. ಇಲ್ಲಿನ ಹೆದ್ದಾರಿಯ ಅಂಡರ್ ಪಾಸ್ ಮೇಲ್ಛಾವಣಿ ಅಡ್ಡವಿರುವುದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ತಕ್ಷಣಕ್ಕೆ ದಾರಿ ಹೋಕರಿಗೆ ಕಾಣದ ಕಾರಣದಿಂದ ಇದೇ ಸ್ಥಳದಲ್ಲಿನ ಎಟಿಎಂ ದೋಚಲು ಕಳ್ಳಲು ಕೈ ಚಳಕ ತೋರಿಸಲು ಯತ್ನಿಸಿದ್ದಾರೆ. ಜೆಸಿಬಿಯಿಂದ ಗೋಡೆ ಒಡೆದು ಹಾಕಿದ ಪರಿಣಾಮ ತಡೆಗೋಡೆ ಕೆಳಗೆ ಉರುಳಿ ಬಿದ್ದರೆ, ಕಟ್ಟಡದ ಶೆಟರ್‌ನ ಕೀಲು ಒಂದೇ ಏಟಿಗೆ ಹೊರಗೆ ಬಂದಿದೆ. ಮುಂಭಾಗದಲ್ಲಿ ಅಳವಡಿಸಿದ್ದ ಗಾಜನ್ನು ಒಡೆದು ಹಾಕಿದ ಬಳಿಕ ಒಳಗಿದ್ದ ಎಟಿಎಂ ಯಂತ್ರವನ್ನು ಒಡೆದು ಸಾಗಿಸಲು ಮುಂದಾದಾಗ ಸೈರನ್ ಮೊಳಗುತ್ತಿದ್ದರಿಂದ ಜನರು ಹಾಗೂ ಪೊಲೀಸರು ಬರುವ ಭೀತಿಯಿಂದ ಅರ್ದದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಎಟಿಎಂ ಯಂತ್ರ ಒಡೆಯುವ ಸಂದರ್ಭ ಬ್ಯಾಂಕ್ ಮ್ಯಾನೇಜರ್‌ಗೆ ಸೈರನ್ ಸಂದೇಶ ಹೋಗಿದೆ. ತಕ್ಷಣ ಇದಕ್ಕೆ ಸ್ಪಂದಿಸಿ ಪೊಲೀಸರಿಗೆ ಮಾಹಿತಿ ನೀಡಿ, ಬ್ಯಾಂಕ್ ಅಧಿಕಾರಿಗಳು ಬಂದಾಗ ಅದಾಗಲೇ ಕಳ್ಳರು ಜೆಸಿಬಿ ಸಹಿತ ನಾಪತ್ತೆಯಾಗಿದ್ದರು.
ಶುಕ್ರವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದರು. ಶ್ವಾನ ದಳ ಬೆರಳಚ್ಚು ತಂಡ ಆಗಮಿಸಿತು.ಚಾಲಾಕಿ ಕಳ್ಳರು ಜೆಸಿಬಿ ಮೂಲಕವೇ ಕಳ್ಳತಕ್ಕೆ ಸಂಚು ರೂಪಿಸಿದ್ದರಿಂದ ಹೆಚ್ಚಿನ ಸಾಕ್ಷ ಸಿಕ್ಕಿಲ್ಲ.
ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಜೆಸಿಬಿ ಕಳವುಗೈದು ಸುರತ್ಕಲ್‌ನ ಎಟಿಎಂನಲ್ಲಿನ ಹಣ ದೋಚಲು ಬಳಸಿರುವುದನ್ನು ಪತ್ತೆಮಾಡಲಾಗಿದೆ.
ಇಲ್ಲಿನ ಎಟಿಎಂ ಯಂತ್ರವನ್ನು ಸಣ್ಣ ಬೋಲ್ಟ್ ಮೂಲಕ ನಿಲ್ಲಿಸಲಾಗಿದ್ದು ಜೆಸಿಬಿಯಲ್ಲಿ ದೂಡಿದ ಪರಿಣಾಮ ಒಂದೇ ಎಟಿಗೆ ಎದ್ದು ಬಂದಿತ್ತು. ಅಲ್ಲದೆ ಇಲ್ಲಿನ ಬ್ಯಾಂಕ್ ಶಾಖೆಗೆ ಕಾವಲುಗಾರರು ಇಲ್ಲದ್ದನ್ನು ಗಮನಿಸಿಕೊಂಡೇ ಮುಸುಕು ಹಾಕಿದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ.ಈ ಹಿಂದೆ ಎಟಿಎಂ ಕೇಂದ್ರಗಳಲ್ಲಿ ಕಡ್ಡಾಯವಾಗಿ ಕಾವಲುಗಾರರ ನೇಮಕವಾಗುತ್ತಿತ್ತು. ಆದರೆ ಇದೀಗ ಕೇಂದ್ರಗಳಲ್ಲಿ ಭದ್ರತೆಗಾಗಿ ಸಿಸಿ ಕಣ್ಗಾವಲು ಮಾತ್ರ ಹಾಕಲಾಗುತ್ತಿದೆ.