ಬೆಂಗಳೂರು : ಎಸ್ ಸಿ ಪಿ ಹಾಗೂ ಟಿಎಸ್‌ಪಿ ಮೀಸಲಿಟ್ಟಿರುವ ಹಣವನ್ನು ಇತರೆ ಉದ್ದೇಶ ಗಳಿಗೆ ಬಳಸಲಾಗುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಎಸ್ ಸಿ ಪಿ ಹಾಗೂ ಟಿಎಸ್‌ಪಿ ಗಳಿಗೆ ಇಟ್ಟಿರುವ ಹಣವನ್ನು ಯಾವುದೇ ರೀತಿಯಾಗಿ ಇತರೆ ಕಾರ್ಯಗಳಿಗೆ ಬಳಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್‌ಸಿಪಿ, ಟಿಎಸ್‌ಪಿ ಅಧಿನಿಯಮ 2013ರ ಅನ್ವಯ ಪ.ಜಾತಿ ಮತ್ತು ಪ.ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ವಾಸಸ್ಥಳ ಅಭಿವೃದ್ಧಿಗೆ ಅನುದಾನ ಹಂಚಿಕೆಗೆ ಅವಕಾಶವಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಐದು ಗ್ಯಾರಂಟಿ ಕಾರ್ಯಕ್ರಮಗಳು ಎಸ್ಸಿ, ಎಸ್ಟಿ ಜನರಿಗೆ ನೇರವಾಗಿ ಪ್ರಯೋಜವಾಗುತ್ತಿರುವುದರಿಂದ ಎಸ್‌ಸಿಪಿ, ಟಿಎಸ್‌ಪಿ ಅಡಿ ಮೀಸಲಿಟ್ಟಿರುವ 34,294 ಕೋಟಿ ರು.ಗಳಲ್ಲಿ ಭಾಗಶಃ ಅಂದರೆ 11,144 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗ ಹಂಚಿಕೆ ಮಾಡಲಾಗಿದೆ. ಪೂರ್ಣ ಪ್ರಮಾಣದ ಹಣವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಉಪಯೋಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
11,144 ಕೋಟಿ ರು.ಗಳ ಪೈಕಿ ಈ ಪೈಕಿ 5075 ಕೋಟಿ ರು.ಗೃಹಲಕ್ಷ್ಮಿ, 2779.97 ಕೋಟಿ ರು.ಗಳನ್ನು ಅನ್ನಭಾಗ್ಯ, 2410 ಕೋಟಿ ರು. ಗೃಹ ಜ್ಯೋತಿಗೆ, 812 ಕೋಟಿ ರು.ಗಳನ್ನು ಶಕ್ತಿ ಯೋಜನೆಗೆ ಮತ್ತು 67.50 ಕೋಟಿ ರು.ಗಳನ್ನು ಯುವನಿಧಿ ಯೋಜನೆಗೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ರೀತಿ ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಹಂಚಿಕೆ ಮಾಡುತ್ತಿರುವುದು ಇದೇ ಮೊದಲಲ್ಲ. 2019-20ರಿಂದ 2023-24ರವರೆಗೆ ಇಂಧನ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಸಾರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳಡಿ ಭಾಗಶಃ ಅನುದಾನ ಹಂಚಿಕೆ ಮಾಡಿಕೊಂಡು ಬರಲಾಗಿದೆ. ಅದೇ ರೀತಿ ಈ ಬಾರಿಯೂ ಈ ಐದೂ ಇಲಾಖೆಯಡಿ ಜಾರಿಗೊಳಿಸಿರುವ ಐದೂ ಗ್ಯಾರಂಟಿಗಳಿಗೆ ಎಸ್‌ಸಿಪಿ, ಟಿಎಸ್‌ಪಿಯ ಭಾಗಶಃ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.