ಬ್ರಹ್ಮಾವರದಲ್ಲಿ ಆ. 5ರಂದು ಬೆಳಗ್ಗೆ 10.30ಕ್ಕೆ ಸಂಚಾರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಉದ್ಘಾಟನೆಗೊಳ್ಳಲಿದೆ ಎಂದು ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಕಾಡೂರು ಪ್ರವೀಣ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಜಿಲ್ಲಾ ನ್ಯಾಯಾಂಗ ಉಡುಪಿ, ಲೋಕೋಪಯೋಗಿ ಇಲಾಖೆ, ವಕೀಲರ ಸಂಘ ಬ್ರಹ್ಮಾವರದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಜಿಲ್ಲಾ ನ್ಯಾಯಾಂಗ ಕಟ್ಟಡ ಸಮಿತಿ ಅಧ್ಯಕ್ಷ ಪಿ.ಎಸ್. ದಿನೇಶ್ ಕುಮಾರ್ ಉದ್ಘಾಟಿಸುವರು.
ಬ್ರಹ್ಮಾವರ ಬಂಟರ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ. ಅರುಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾನೂನು ಸಂಸದೀಯ ವ್ಯವಹಾರ, ಶಾಸನ ರಚನೆ ಸಚಿವ ಎಚ್.ಕೆ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಭಾಗವಹಿಸಲಿದ್ದಾರೆ ಎಂದರು.
ಬ್ರಹ್ಮಾವರದ ನ್ಯಾಯಾಲಯದಿಂದ ಬ್ರಹ್ಮಾವರ ತಾಲೂಕಿನ ಜನರಿಗೆ ಹತ್ತಿರದಲ್ಲೇ ನ್ಯಾಯದಾನದ ವ್ಯವಸ್ಥೆಯಾಗುತ್ತಿದೆ. ಜನರ ಹಣ ಹಾಗೂ ಸಮಯ ಉಳಿತಾಯ ವಾಗಲಿದೆ ಎಂದರು.
ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರದ ಹಳೆ ಕಟ್ಟಡವನ್ನು ನವೀಕರಿಸಿ 87 ಲಕ್ಷ ರೂ. ವೆಚ್ಚದಲ್ಲಿ ನ್ಯಾಯಾಲಯ ನಿರ್ಮಿಸಲಾಗಿದೆ. ವಕೀಲರಿಗೆ, ಶಿರಸ್ತೆದಾರರಿಗೆ, ಸರಕಾರಿ ವಕೀಲರಿಗೆ ಪ್ರತ್ಯೇಕ ಕೊಠಡಿಗಳು, ಕೋರ್ಟ್ ಕಲಾಪಕ್ಕೆ ಸಭಾಂಗಣ, ಪೀಠೊಪಕರಣ, ಶೌಚಾಲಯ ಸೇರಿದಂತೆ ಸಕಲ ವ್ಯವಸ್ಥೆಗಳು ಇಲ್ಲಿವೆ. ಮೊದಲು ಪ್ರಾಥಮಿಕ ಸಂಚಾರಿ ಪೀಠ ಆರಂಭಿಸಿ ಕ್ರಮೇಣ ಖಾಯಂ ಪೀಠಕ್ಕೆ ಅನುಮೋದನೆ ನೀಡಲಾಗುತ್ತದೆ ಎಂದು ತಿಳಿಸಿದರು.
ಬ್ರಹ್ಮಾವರ ನ್ಯಾಯಾಲಯದಲ್ಲಿ ಬ್ರಹ್ಮಾವರ ಹಾಗೂ ಕೋಟ ಹೋಬಳಿಯ 52 ಗ್ರಾಮಗಳ ಪ್ರಕರಣಗಳು ಇತ್ಯರ್ಥವಾಗಲಿವೆ. ಈವರೆಗೂ ಇವು ಉಡುಪಿ ಮತ್ತು ಕುಂದಾಪುರ ನ್ಯಾಯಾಲಯಕ್ಕೆ ಹಂಚಿಕೆಯಾಗಿದ್ದವು. ಸಿವಿಲ್ ಕ್ರಿಮಿನಲ್ ಚೆಕ್ ಬೌನ್ಸ್, ಇತರ ಪ್ರಕರಣಗಳು ಸೇರಿ 4,000ಕ್ಕೂ ಮಿಕ್ಕಿ ಕೇಸುಗಳು ಬ್ರಹ್ಮಾವರ ನ್ಯಾಯಾಲಯಕ್ಕೆ ಬರಲಿವೆ. ಬ್ರಹ್ಮಾವರ ವಕೀಲರ ವೇದಿಕೆಯಲ್ಲಿ 65 ಮಂದಿ ಸದಸ್ಯರಿದ್ದು ಮುಂದೆ ಕುಂದಾಪುರ ಹಾಗೂ ಉಡುಪಿಯ ವಕೀಲರು ಕೂಡ ಕೇಸು ನಡೆಸಲು ಬ್ರಹ್ಮಾವರಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆಯಾಗಿ 100 ಮಂದಿ ವಕೀಲರು ಹಾಗೂ ನೂರಾರು ಕಕ್ಷಿದಾರರ ಚಟುವಟಿಕೆ ಬ್ರಹ್ಮಾವರ ಕೋರ್ಟ್‌ನಲ್ಲಿ ನಡೆಯಲಿದೆ ಎಂದರು.
ಉಡುಪಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್, ಬ್ರಹ್ಮಾವರ ವಕೀಲರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕರ್ಜೆ, ಕಾರ್ಯದರ್ಶಿ ಶ್ರೀಪಾದ ರಾವ್, ಜತೆ ಕಾರ್ಯದರ್ಶಿ ಮಹಮ್ಮದ್ ಸುಹಾನ್, ಖಜಾಂಚಿ ಸ್ಟೀವನ್ ಲೂವಿಸ್ ಪತ್ರಿಕಾಗೋಷ್ಠಿಯಲ್ಲಿದ್ದರು.