ಕಾರವಾರ :ಸ್ವಿಚ್ ಬೋರ್ಡಿಗೆ ಹಾಕಿದ್ದ ಮೊಬೈಲ್ ಚಾರ್ಜರ್ ವೈಯರ್‌ನ ತುದಿಯನ್ನು ಮಗುವೊಂದು ಬಾಯಿಗಿಟ್ಟ ಪರಿಣಾಮ ವಿದ್ಯುತ್ ಪ್ರವಹಿಸಿದ ಘಟನೆ ನಡೆದಿದ್ದು, ಮಗು ಮೃತಪಟ್ಟಿದೆ.ಸಾನಿಧ್ಯ ಕಲ್ಲುಟಕರ್ (8 ತಿಂಗಳು) ಮೃತಪಟ್ಟ ಮಗು. ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸಮೀಪ ಸಿದ್ಧರ ಎಂಬಲ್ಲಿ ಮಂಗಳವಾರ ಬೆಳಗ್ಗೆ ಈ ದಾರುಣ ಘಟನೆ ನಡೆದಿದೆ.
ಸಿದ್ದರದ ಸಂತೋಷ ಕಲ್ಗುಟಕರ್, ಸಂಜನಾ ಕಲ್ಗುಟಕರ್ ದಂಪತಿಯ ಎಂಟು ತಿಂಗಳ ಹೆಣ್ಣು ಮಗು ಸಾನಿಧ್ಯ ಕಲ್ಲುಟಕರ್ ಬೆಳಿಗ್ಗೆ ಮನೆಯಲ್ಲಿ ಸ್ವಿಚ್ ಬೋರ್ಡ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಬಾಯಿಗಿಟ್ಟಿದೆ. ಚಾರ್ಜರ್ ಅನ್ನು ಹಾಗೆಯೇ ಬಿಟ್ಟಿದ್ದು, ಸ್ವಿಚ್ ಆನ್ ಇತ್ತು. ಮೊಬೈಲಿಗೆ ಚಾರ್ಜರ್ ಸಿಕ್ಕಿಸಿಕೊಂಡು ಇರಲಿಲ್ಲವಾದ ಕಾರಣ, ಅದನ್ನು ಹಿಡಿದ ಮಗು ಹಾಗೆಯೇ ಕುತೂಹಲದಿಂದ ಬಾಯಿಗೆ ಹಾಕಿದೆ. ಈ ಸಂದರ್ಭ ವಿದ್ಯುತ್ ಪ್ರವಹಿಸಿದೆ. ವಿಷಯ ತಿಳಿದ ಕೂಡಲೇ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಆದರೆ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.