ಮೈಸೂರು : ರಾಜ್ಯದ ಸಾಂಸ್ಕೃತಿಕ ನಗರಿಯ ಪ್ರಮುಖ ಪ್ರವಾಸಿ ಕೇಂದ್ರವಾದ ಮೈಸೂರು ಅರಮನೆಗೆ ಎರಡು ದಿನಗಳ ಕಾಲ ಎಲ್ಲ ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಮೈಸೂರಿನಲ್ಲಿ ಆಗಸ್ಟ್ 1 ಮತ್ತು 2 ರಂದು ನಡೆಯುವ ಜಿ 20 ಶೃಂಗಸಭೆಯಲ್ಲಿ (G20 Summit) ಭಾಗಿಯಾಗುವ ವಿದೇಶಿ ಗಣ್ಯರು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಆದ್ದರಿಂದ ಪೊಲೀಸರು ಹಾಗೂ ರಾಜ್ಯ ಸರ್ಕಾರವು ಅಗತ್ಯ ಮುಂಜಾಗೃತ ಕ್ರಮವನ್ನು ಕೈಗೊಳ್ಳುವ ದೃಷ್ಟಿಯಿಂದ ಎಲ್ಲ ಮಾದರಿಯ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ, ಮೈಸೂರು ಅರಮನೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಮೈಸೂರು ಅರಮನೆ ಆಡಳಿತ ಮಂಡಳಿಯ ಉಪ ನಿರ್ದೇಶಕ ಟಿ. ಎಸ್. ಸುಬ್ರಮಣ್ಯ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 1ರ ಮಧ್ಯಾಹ್ನ 2.30 ರಿಂದ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ನಂತರ, ಆಗಸ್ಟ್ 2 ರಂದು ರಾತ್ರಿ 7 ರಿಂದ 8 ಗಂಟೆಯವರೆಗೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮದವರೆಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆದ್ದರಿಂದ ಎರಡು ದಿನಗಳ ಜಾಲ ರಾಜ್ಯದ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕಾರ ನೀಡಬೇಕು ಎಂದು ಅರಮನೆ ಆಡಳಿತ ಮಂಡಳಿಯು ಮನವಿ ಮಾಡಿದೆ.