ಮಂಗಳೂರು:0-23 ತಿಂಗಳ ಮಕ್ಕಳಿಗೆ ನಿಯಮಿತ ಅವಧಿಯಲ್ಲಿ ನೀಡಬೇಕಾದ ರೋಗನಿರೋಧಕ ಲಸಿಕೆಗಳು, 2-5 ವರ್ಷದೊಳಗಿನ ಮಕ್ಕಳಿಗೆ ಎಂಆರ್-1, ಎಂಆರ್-2, ಫೆಂಟಾ ಮತ್ತು ಓಪಿವಿ ಲಸಿಕಾ ಡೋಸ್‍ಗಳು ಹಾಗೂ ರೋಗ ನಿರೋಧಕ ಹಾಗೂ ಸುರಕ್ಷಿತ ಲಸಿಕೆ ಪಡೆಯದ ಅಥವಾ ಭಾಗಶಃ ಪಡೆದಿರುವ ಗರ್ಭೀಣಿಯರನ್ನು ಬರುವ ಆಗಸ್ಟ್ 7 ರಿಂದ 12ರ ವರೆಗೆ ನಡೆಯಲಿರುವ ಇಂದ್ರಧನುಷ್ 5.0 ಅಭಿಯಾನದ ಮೊದಲ ಹಂತದಲ್ಲಿ ಪತ್ತೆ ಮಾಡಿ ಲಸಿಕೆ ನೀಡುವ ಮೂಲಕ ಜಿಲ್ಲೆಯಲ್ಲಿ ಶೇ.100 ರಷ್ಟು ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಂದ್ರಧನುಷ್ ಮತ್ತು ದಡಾರ ಹಾಗೂ ರುಬೆಲ್ಲಾ ನಿರ್ಮೂಲನಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಾಕಿ ಉಳಿದ ಅರ್ಹ ಫಲಾನುಭವಿಗಳನ್ನು ಪತ್ತೆ ಮಾಡುವುದು ಹಾಗೂ ಜಿಲ್ಲೆಗೆ ವಲಸೆ ಬಂದಿರುವ ಕಟ್ಟಡ ಹಾಗೂ ಇತರೆ ಕಾರ್ಮಿಕರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಆರೋಗ್ಯ ಹಾಗೂ ಕಾರ್ಮಿಕ ಇಲಾಖೆ ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಿ, ಅರ್ಹ ಫಲಾನುಭವಿಗಳು ನಿಗಧಿ ಪಡಿಸಿರುವ ಅಭಿಯಾನದ ಸಮಯದಲ್ಲಿ ಲಸಿಕೆ ಪಡೆಯದೇ ಬಿಟ್ಟು ಹೋಗದಂತೆ ಎಚ್ಚರ ವಹಿಸಬೇಕು, ಈ ಬಗ್ಗೆ ಕೈಗೊಂಡಿರುವ ಸಮೀಕ್ಷಾ ಕಾರ್ಯ ಪೂರ್ಣಗೊಂಡ ನಂತರ ಆರೋಗ್ಯ ಇಲಾಖೆಯಿಂದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ತಿಳಿಸಿದರು.
ಪ್ರಮುಖವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪಂಚಾಯತ್ ರಾಜ್, ಪೌರಾಡಳಿತ, ಶಿಕ್ಷಣ, ವೈದ್ಯಕೀಯ ಶಿಕ್ಷಣ, ಕಾರ್ಮಿಕ, ಯುವ ಜನ ಸೇವಾ ಕ್ರೀಡಾ ಇಲಾಖೆ, ರೈಲ್ವೆ ಇಲಾಖೆ ಸೇರಿದಂತೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಈ ಅಭಿಯಾನದಲ್ಲಿ ಭಾಗವಹಿಸಿ ಪೋಲೀಯೋ ನಿರ್ಮೂಲನೆಯಂತೆ ದಡಾರ ಹಾಗೂ ರುಬೆಲ್ಲಾವನ್ನು ನಿರ್ಮೂಲನೆಗೊಳಿಸಲು ಪರಿಣಾಮಕಾರಿಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಆರ್‍ಸಿಎಚ್ ಅಧಿಕಾರಿ ನಿರ್ದಿಷ್ಟ ಮಾರ್ಗದರ್ಶನ ನೀಡುವಂತೆ ಸೂಚಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಮೆಡಿಕಲ್ ಆಫೀಸರ್ ಅನಂತೇಶ್ ಮಾತನಾಡಿ, ಇಂದ್ರಧನುಷ್ ಅಭಿಯಾನ ಈ ವರ್ಷದ ಆಗಸ್ಟ್ 7-12, ಸೆಪ್ಟಂಬರ್ 11-16 ಹಾಗೂ ಅಕ್ಟೋಬರ್ 9-14ರ ವರೆಗೆ ಜಿಲ್ಲೆಯಲ್ಲಿ ಮೂರು ಹಂತಗಳಲ್ಲಿ ನಡೆಯಲಿದೆ ಎಂದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕಿಶೋರ್ ಕುಮಾರ್ ಎಂ ಸ್ವಾಗತಿಸಿದರು.
ಜಿಲ್ಲಾ ವೆನ್ಲಕ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿಸ್ತಕ ಮತ್ತು ಅಧೀಕ್ಷಕ ಡಾ. ಸದಾಶಿವ ಶಾನುಭೋಗ್, ಆರ್‍ಸಿಎಚ್ ಅಧಿಕಾರಿ ಡಾ. ರಾಜೇಶ್ ಇದ್ದರು.