ಮಂಗಳೂರು : ಗರ್ಭಿಣಿಯೊಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ನಂತರ ನಡೆದ ಬೆಳವಣಿಗೆಯಲ್ಲಿ ಮಗುವನ್ನು ಹೆತ್ತ ಬಳಿಕ ಕೋಮಾಕ್ಕೆ ತಲುಪಿ ಮೃತಪಟ್ಟ ಘಟನೆಗೆ ಸಂಬಂಧಿಸಿ, ಮಹಿಳೆಯ ಸಮುದಾಯದವರು ಹಾಗೂ ಸಾರ್ವಜನಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಮಂಗಳೂರಿನಲ್ಲಿ ಬುಧವಾರ ಬೆಳಗ್ಗೆ ನಡೆಯಿತು.
ಮಂಗಳೂರಿನ ಖಾಸಗಿ ಆಸ್ಪತ್ರೆ ನಿರ್ಲಕ್ಷ್ಯದಿಂದ ಮಹಿಳೆ ಸಾವು ಸಂಭವಿಸಿದ್ದಾಗಿ ಆರೋಪಿಸಿ ಆಸ್ಪತ್ರೆ ಮುಂದೆ ಮಹಿಳೆ ಕುಟುಂಬಸ್ಥರು, ವಿಶ್ವಕರ್ಮ ಸಮುದಾಯದ ಪ್ರತಿನಿಧಿಗಳು ಜಮಾಯಿಸಿದರು. ಆಂಬುಲೆನ್ಸಲ್ಲಿ ಶವ ಮುಂದಿಟ್ಟ ಪ್ರತಿಭಟನಾಕಾರರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜುಲೈ 2ರಂದು ಈ ಆಸ್ಪತ್ರೆಗೆ ದಾಖಲಾಗಿದ್ದ ಮೂಡುಬಿದ್ರೆಯ ಶಿಲ್ಪ ಆಚಾರ್ಯ ಎಂಬ ಮಹಿಳೆ ಸಾವನ್ನಪ್ಪಿದ್ದರು.
ಪರೀಕ್ಷೆ ನಡೆಸುತ್ತಿದ್ದ ವೈದ್ಯರು ಭಾನುವಾರ ರಜೆಯೆಂದು ಹೆರಿಗೆ ನಡೆಸಲು ಬಾರದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪ . ಮಹಿಳೆಗೆ ಡ್ಯೂಟಿ ಡಾಕ್ಟರ್ ಹೆರಿಗೆ ನಡೆಸಿದ್ದರು. ಮಗುವಿಗೆ ಜನ್ಮವಿತ್ತ ಮಹಿಳೆ ಕೋಮಾಕ್ಕೆ ಜಾರಿದ್ದರು.
ಜುಲೈ 24ರಂದು ಮಹಿಳೆ ಸಾವು ಕಂಡಿದ್ದಾಗಿ ವೈದ್ಯರಿಂದ ಕುಟುಂಬಕ್ಕೆ ಮಾಹಿತಿ ನೀಡಲಾಗಿದ್ದು,ಆರೋಗ್ಯದಿಂದಿದ್ದ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದ್ದಾಗಿ ಆಕ್ರೋಶ ವ್ಯಕ್ತವಾಗಿದೆ. ಆಸ್ಪತ್ರೆ ಮುಂದೆ ಪೊಲೀಸರು ಮತ್ತು ಆಕ್ರೋಶಿತರ ಮಧ್ಯೆ ವಾಕ್ಸಮರ ನಡೆಯಿತು. ಆಸ್ಪತ್ರೆ ಮುಖ್ಯಸ್ಥರು ಸ್ಥಳಕ್ಕೆ ಬರಬೇಕೆಂದು ಆಕ್ರೋಶಿತರ ಪಟ್ಟು ಹಿಡಿದರು.ಆಸ್ಪತ್ರೆ ಮುಂದೆ ಸೇರಿದ ನೂರಾರು ಆಕ್ರೋಶಿತರು ಸೇರಿದ್ದರು.
ಆಸ್ಪತ್ರೆಯ ಶವಗಾರದಲ್ಲಿದ್ದ ಮಹಿಳೆಯ ಮೃತದೇಹವನ್ನು ಪೋಸ್ಟ್ ಮಾರ್ಟಂ ಗೆ ವೆನ್ಲಾಕ್ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಪ್ರತಿಭಟನಕಾರರು ತಡೆದು ಆಸ್ಪತ್ರೆ ಬಳಿ ನಿಲ್ಲಿಸಿ ಪ್ರತಿಭಟಿಸಿದರು. ಆದರೆ ಪೊಲೀಸರು ಬಲವಂತವಾಗಿ ಆಯಂಬುಲೆನ್ಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಆಸ್ಪತ್ರೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರೂ ಯಾರು ಕೂಡ ಬರಲಿಲ್ಲ. ಕೊನೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುವ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಅಲ್ಲಿಂದ ತೆರಳಿದ್ದಾರೆ.