ಮಂಗಳೂರು: ವ್ಯಕ್ತಿಯೊಬ್ಬರು ದೇವಸ್ಥಾನದಲ್ಲಿ ಚಪ್ಪಲಿ ಕಳೆದು ಹೋದ ಬಗ್ಗೆ 112ಕ್ಕೆ ಕರೆ ಮಾಡಿ ದೂರು ದಾಖಲಿಸಿ ಪೊಲೀಸರನ್ನು ಕರೆಯಿಸಿ ಹುಡುಕಾಡಿಸಿದ್ದಾರೆ.
ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಮಂಗಳೂರು ನಗರದ ಬಾಲಂಭಟ್ ಹಾಲ್‌ನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬರ ಚಪ್ಪಲಿ ಕಾಣೆಯಾಗಿತ್ತು. ಹುಡುಕಾಡಿ ಚಪ್ಪಲಿ ಸಿಗದೇ ಇದ್ದಾಗ ವ್ಯಕ್ತಿ ನೇರವಾಗಿ ಪೊಲೀಸ್ ಕಂಟ್ರೋಲ್ ರೂಂ ನಂಬರ್ 112ಗೆ ಕರೆ ಮಾಡಿ ದೂರಿದ್ದಾರೆ. ದೂರು ಬಂದ ಕೂಡಲೇ ಪರಿಶೀಲನೆಗೆ ಬಂದರು ಠಾಣೆ ಪೊಲೀಸರು ಬಾಲಂಭಟ್ ಹಾಲ್‌ಗೆ ಆಗಮಿಸಿದ್ದಾರೆ.
ಹಾಲ್ ಬಳಿ ಚಪ್ಪಲಿಗಾಗಿ ಪೊಲೀಸರು ಹುಡುಕಾಟವನ್ನೂ ನಡೆಸಿದ್ದಾರೆ. ಚಪ್ಪಲಿ ಕಳೆದುಕೊಂಡ ವ್ಯಕ್ತಿ, ತಾನು ಇಲ್ಲೇ ಚಪ್ಪಲಿ ಇರಿಸಿದ್ದು, ಈಗ ಅದು ನಾಪತ್ತೆಯಾಗಿದೆ. ಯಾರೋ ಹಾಕಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಬಳಿಕ ಪೊಲೀಸರು ಹಾಲ್‌ನಲ್ಲಿ ಅಳವಡಿಸಿದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಮಾರ್ಕೆಟ್‌ನಿಂದ ಸಾಮಗ್ರಿ ಹಾಕಲು ಬಂದ ವ್ಯಕ್ತಿಯೊಬ್ಬ ಚಪ್ಪಲಿ ಹಾಕಿಕೊಂಡು ತೆರಳಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಠಾಣೆಗೆ ಬಂದು ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ದೂರು ನೀಡಲು ವ್ಯಕ್ತಿ ನಿರಾಕರಿಸಿದ್ದಾನೆ. ಪೊಲೀಸರು ಚಪ್ಪಲಿ ಕಳವು ದೂರಿಗೂ ಕ್ಷಿಪ್ರವಾಗಿ ಸ್ಪಂದಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ