ರಾಜ್ಯದ ಕರಾವಳಿ ಮೂರು ಜಿಲ್ಲೆಗಳಲ್ಲಿ ಮಳೆ ಮತ್ತೆ ಬಿರುಸನ್ನು ಪಡೆಯುತಿದ್ದು, ಜು. 20ರವರೆಗೆ ಯೆಲ್ಲೋ ಅಲರ್ಟ್, 21 ಮತ್ತು 22ಕ್ಕೆ ಆರೆಂಜ್ ಅಲರ್ಟ್‌ನ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ನಡುವೆ ಜು. 21ರವರೆಗೆ ಕರಾವಳಿ ತೀರದುದ್ದಕ್ಕೂ ಗಂಟೆಗೆ 40ರಿಂದ 45 ಕಿ. ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರ ಪ್ರಕ್ಷುಬ್ಧವಾಗಿರಲಿದ್ದು, ಇಂದು ರಾತ್ರಿ 11: 30ರವರೆಗೆ 2ರಿಂದ 2. 8ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ ಎಂದೂ ಹವಾಮಾನ ವರದಿಯಲ್ಲಿ ತಿಳಿಸಲಾಗಿದೆ.