ಉಡುಪಿ : ಜುಲೈ 18ರಿಂದ ಒಂದು ತಿಂಗಳ ಕಾಲ ಅಧಿಕ ಶ್ರಾವಣಮಾಸ ಇರುವುದರಿಂದ ಈ ಸಂದರ್ಭದಲ್ಲಿ ದೇವತಾ ಪ್ರೀತ್ಯರ್ಥವಾಗಿ ಮಾಡುವ ಯಾವುದೇ ಸತ್ಕರ್ಮಗಳಿಗೆ ಅತ್ಯಧಿಕ ಫಲ. ಹೀಗಾಗಿ ನಾಡಿನಾದ್ಯಂತ ಅಯೋಧ್ಯಾಪತಿ ಶ್ರೀರಾಮನ ಕೃಪೆಗಾಗಿ, ಲೋಕ ಕ್ಷೇಮಕ್ಕಾಗಿ ಪ್ರಾರ್ಥಿಸಿ ದಶಕೋಟಿ ರಾಮ ಜಪಯಜ್ಞ ನಡೆಸುವಂತೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.
ಪುರುಷೋತ್ತಮ ಮಾಸವೆಂದೇ ಕರೆಯಲ್ಪಡುವ ಈ ಅಧಿಕ ಮಾಸದಲ್ಲಿ ರಾಮನ ನೆನೆಯೋಣ. ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳು – ಯುವಕರು ಯುವತಿಯರು ಮಹಿಳೆಯರು ಪುರುಷರು ವೃದ್ಧರು ಶುದ್ಧಮನಸ್ಸಿನಿಂದ ಕನಿಷ್ಠ ಹತ್ತು ನಿಮಿಷಗಳ ಕಾಲ ಜಪಮಾಡಿ. 108 ಬಾರಿ ಶ್ರೀರಾಮ ಜಯರಾಮ ಜಯ ಜಯ ರಾಮ ಎನ್ನುವ ಶ್ರೀ ರಾಮನ ಜಪವನ್ನು ಮಾಡಿ. ಕೊನೆಯಲ್ಲಿ ಇಡೀ ಲೋಕಕ್ಕೆ ಕ್ಷೇಮವನ್ನು ಕರುಣಿಸುವಂತೆ ಪ್ರಾರ್ಥಿಸಬೇಕು ಎಂದರು.
ಎಲ್ಲಾ ದೇವಸ್ಥಾನಗಳು ಮಠ ಮಂದಿರಗಳು ಭಜನಾ ಮಂದಿರಗಳು ಸೇವಾ ಸಂಸ್ಥೆಗಳು, ಸಂಘಟನೆಗಳು ಶಿಕ್ಷಣ ಸಂಸ್ಥೆಗಳು ಕಾರ್ಯಕರ್ತರಾಗಬೇಕು. ಕನಿಷ್ಠ ಮೂರರಿಂದ ಐದು ದಿನಗಳ ಕಾಲ ಎಲ್ಲರೂ ಒಂದೆಡೆ ಸೇರಿ ಸರಳ ಮತ್ತು ಸುಲಭ ರೀತಿಯಲ್ಲಿ ರಾಮಜಪ ನಡೆಸಬೇಕು. ಶ್ರೀರಾಮನಲ್ಲಿ ಇಡೀ ಲೋಕದಲ್ಲಿ ಶಾಂತಿ ಸುಭಿಕ್ಷೆ, ಸಮೃದ್ಧಿ ಸಕಲ ಜೀವರಾಶಿಗಳಿಗೆ ಶ್ರೇಯಸ್ಸು ಲಭಿಸುವಂತೆ ಪ್ರಾರ್ಥನೆ ಮಾಡಬೇಕು. ಅಯೋಧ್ಯೆಯಲ್ಲಿ ಶತಶತಮಾನಗಳ ಕನಸೊಂದು ನನಸಾಗಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. 2024 ಜನವರಿ ಅಂತ್ಯದ ವೇಳೆಗೆ ನೂತನ ಮಂದಿರದಲ್ಲಿ ಶ್ರೀ ಸೀತಾ ರಾಮಚಂದ್ರನ ಪ್ರತಿಷ್ಠಾಪನೆಯೂ ನೆರವೇರಲಿದೆ. ಈ ಅಪೂರ್ವ ಸಂದರ್ಭಕ್ಕೆ ಸಾಕ್ಷಿಗಳಾಗುವ ಸುಯೋಗ ನಮಗೆಲ್ಲ ಒದಗಿರುವುದು ಸುಕೃತವೇ ಸರಿ. ಆದ್ದರಿಂದ ರಾಮನ ಸ್ಮರಣೆಯಲ್ಲಿ ನಾಡಿ ನಾದ್ಯಂತ ಸೇವಾಕಾರ್ಯಗಳು ನಡೆಯುವಂತಾಗಾಲಿ ಎಂದು ಶ್ರೀಗಳು ಆಶಯ ವ್ಯಕ್ತಪಡಿಸಿದರು.