ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಅವರ ಪತ್ನಿ, ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಚಿನ್ನದ ಶಂಖ ಮತ್ತು ಕೂರ್ಮಪೀಠವನ್ನು ದಾನವಾಗಿ ನೀಡಿದ್ದಾರೆ.
ಭಾನುವಾರ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದ ನಾರಾಯಣಮೂರ್ತಿ-ಸುಧಾ ದಂಪತಿ, ಸುಮಾರು 2 ಕೆಜಿ ತೂಕದ ಚಿನ್ನದ ಈ ವಸ್ತುಗಳನ್ನು ದೇಣಿಗೆಯಾಗಿ ಸಮರ್ಪಿಸಿದರು. ಇವುಗಳ ಬೆಲೆ ಸುಮಾರು 1.25 ಕೋಟಿ ರೂ. ಎಂದು ಹೇಳಲಾಗಿದೆ. ಇವುಗಳನ್ನು ದೇವರ ಅಭಿಷೇಕಕ್ಕೆ ಬಳಸಲಾಗುತ್ತದೆ.
ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಎ.ವಿ. ಧರ್ಮ ರೆಡ್ಡಿ ಅವರು ಇವುಗಳನ್ನು ದೇವಸ್ಥಾನದ ಪರವಾಗಿ ಸ್ವೀಕರಿಸಿದರು. ನಂತರ ನಾರಾಯಣಮೂರ್ತಿ ದಂಪತಿಗೆ ಶೇಷವಸ್ತ್ರ ತೊಡಿಸಿ ಸನ್ಮಾನಿಸಿ ಪ್ರಸಾದ ನೀಡಿದರು. .