ಉಡುಪಿ ತಾಲೂಕಿನ ಶಿರಿಬೀಡು ವಾರ್ಡ್ನಲ್ಲಿ ಶಿಥಿಲಗೊಂಡ ಕಾಲು ಸೇತುವೆಯು ಕುಸಿಯುವ ಪರಿಸ್ಥಿತಿಯಲ್ಲಿದ್ದು, ಇಲ್ಲಿನ ಜನರು ನಿತ್ಯ ಭೀತಿಯಿಂದಲೇ ಸೇತುವೆ ಮೇಲೆ ಸಂಚರಿಸುವಂತಾಗಿದೆ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಈ ಸೇತುವೆ ಮೇಲೆ ಪ್ರತಿನಿತ್ಯವೂ ನೂರಾರು ಜನರು ಸಂಚರಿಸುತ್ತಿದ್ದು, ದ್ವಿಚಕ್ರ ವಾಹನ ಸವಾರರು ಕೂಡ ಈ ಸೇತುವೆ ಮೇಲಿಂದ ಸಂಚರಿಸುತ್ತಾರೆ. ಈ ಸೇತುವೆ ಉಡುಪಿ ಬಸ್ ಸ್ಟ್ಯಾಂಡ್‌ನಿಂದ ತಾಲೂಕು ಆಫೀಸ್‌ಗೆ ಒಳದಾರಿಯಾಗಿದ್ದು, ಜೊತೆಗೆ ಅಂಬಲಪಾಡಿ ದೇವಸ್ಥಾನ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನ ಮತ್ತು ಸೈಂಟ್ ಸಿಸಿಲಿಸ್ ಕಾನ್ವೆಂಟ್ ಶಾಲೆಯನ್ನು ಸಂಪರ್ಕಿಸಲು ಈ ಸೇತುವೆ ಸಹಕಾರಿಯಾಗಿದೆ. ಹಾಗೂ ದಿನನಿತ್ಯ ನೂರಾರು ಜನ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದೀಗ ಸೇತುವೆ ಶಿಥಿಲಗೊಂಡಿರುವ ಕಾರಣ ಜನರು ಸೇತುವೆ ಮೇಲೆ ಹೋಗಲು ಭಯಪಡುತ್ತಿದ್ದಾರೆ. ಅಲ್ಲದೆ ಉಡುಪಿ ನಗರ ವ್ಯಾಪ್ತಿಯ ಮಳೆ ನೀರು ಈ ತೋಡಿನಲ್ಲಿ ಹರಿದು ಹೋಗುತ್ತಿದ್ದು, ದಿನನಿತ್ಯ ಈ ಪರಿಸರದಲ್ಲಿ ನೆರೆ ಕೂಡಾ ಉಂಟಾಗುತ್ತಿದೆ. ಸದ್ಯ ಈ ಸೇತುವೆ ಯಾವುದೇ ಸಂದರ್ಭದಲ್ಲೂ ಕುಸಿದು ನೀರು ಪಾಲಾಗುವ ಪರಿಸ್ಥಿತಿಯಲ್ಲಿದ್ದು ಜನರು ಹೆದರಿಕೆಯಲ್ಲಿ ಜೀವ ಕೈಯಲ್ಲಿಡಿದುಕೊಂಡು ಸೇತುವೆಯನ್ನು ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.ಎಂದು ತಿಳಿಸಿದ್ದಾರೆ.
ಇನ್ನು ಈ ಹಿಂದೆ ನಗರಸಭಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದರೂ, ಯಾರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಷ್ಟು ಮಾತ್ರವಲ್ಲದೆ ಸ್ಥಳೀಯ ನಗರಸಭಾ ಸದಸ್ಯರು ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಉಡುಪಿ ಜಿಲ್ಲಾಧಿಕಾರಿಯವರು ಕೂಡಲೇ ಈ ಸೇತುವೆಯ ದುರಸ್ತಿಯ ಕಾರ್ಯವನ್ನು ಕೈಗೆತ್ತಿಕೊಂಡು ಜನಸಾಮಾನ್ಯರ ಪ್ರಾಣವನ್ನು ಉಳಿಸಿಕೊಡುವ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.