ಉಡುಪಿ : ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ಮಾನ್ಯತೆ ಇದೆ. ಆಟಿ ಕಷಾಯಕ್ಕೂ ವಿಶೇಷ ಮೌಲ್ಯವಿದೆ.
ಹಾಲೆ ಮರದ ತೊಗಟೆಯ ಕಷಾಯ (ಪಾಲೆದ ಕೆತ್ತೆದ ಕಷಾಯ)ವೆಂದೇ ಹೆಸರುವಾಸಿಯಾಗಿದೆ
ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ದಿನದಂದು ಸಾಮೂಹಿಕವಾಗಿ ಕಷಾಯ ಸೇವಿಸುವ ಪದ್ಧತಿ ನಡೆದು ಬಂದಿದೆ.ಈ ಕಷಾಯ ಹಲವು ಔಷಧೀಯ ಗುಣಗಳನ್ನು ಹೊಂದಿರುತ್ತದೆ.
ಕಡುಕಷ್ಟದ ತಿಂಗಳೆಂದೇ ಉಲ್ಲೇಖವಿರುವ ಆಟಿ ಮಾಸದಲ್ಲಿ ಅಮಾವಾಸ್ಯೆ ಹಿಂದಿನ ದಿನ ಸಂಜೆ ಮರಕ್ಕೆ ನೂಲು ಕಟ್ಟಿ ‘ನಾಳೆ ಬರುತ್ತೇನೆ ಮದ್ದು ಸಿದ್ಧ ಮಾಡಿಡು’ ಎಂದು ವನದೇವತೆಯನ್ನು ಪ್ರಾರ್ಥಿಸಿ ಬರುವ ಕ್ರಮವಿದೆ.ಮರುದಿನ ಸೂರ್ಯ ಹುಟ್ಟುವ ಮುನ್ನ ಗಂಡಸರು ಬೆತ್ತಲೆಯಾಗಿ ಹಾಲೆ ಮರದ ಬಳಿ ಹೋಗಿ, ಕಲ್ಲಿನಿಂದ ಹಾಲೆಯ ತೊಗಟೆಯನ್ನು ಜಜ್ಜಿಕೊಂಡು ಬಂದು, ಅದರ ರಸವನ್ನು ಕರಿಮೆಣಸು, ಜೀರಿಗೆ, ಓಮ, ಬೆಳ್ಳುಳ್ಳಿ ಜೊತೆ ಅರೆದು ಮಿಶ್ರಣ ಮಾಡಿ, ಬೆಣಚು ಕಲ್ಲನ್ನು ಬಿಸಿ ಮಾಡಿ ಮಿಶ್ರಣಕ್ಕೆ ಮುಳುಗಿಸುತ್ತಾರೆ. ನಂತರ ಸಾಸಿವೆ ಒಗ್ಗರಣೆ ಕೊಟ್ಟು ಖಾಲಿ ಹೊಟ್ಟೆಯಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೂ ಕಷಾಯವನ್ನು ಕುಡಿಯುತ್ತಾರೆ. ಬಾಯಿಯ ಕಹಿಗೆ ಬೆಲ್ಲ, ಉಷ್ಣಕ್ಕೆ ಮೆತ್ತೆಗಂಜಿ ಸೇವಿಸುತ್ತಾರೆ.
ಈ ಮರದಲ್ಲಿ ಆಟಿ ಅಮಾವಾಸ್ಯೆಯ ದಿನ ಸಾವಿರದ ಒಂದು ಬಗೆಯ ಔಷಧಿಗಳು ಸೇರಿಕೊಂಡಿರುತ್ತವೆ ಎಂಬ ನಂಬಿಕೆ ಇದೆ. ಹಾಲೆಮರದ ತೊಗಟೆಯ ರಸ ಸೇವಿಸಿದರೆ ಹೊಟ್ಟೆನೋವು, ಕಫ ಮತ್ತಿತರೆ ಕಾಯಿಲೆಗಳು ಒಂದು ವರ್ಷ ಬರುವುದಿಲ್ಲ ಎಂಬ ನಂಬಿಕೆ ಇದೆ.