ಬೈಂದೂರು :ಹಳದಿ ಮೇಣದಂತಹ ವಸ್ತುವನ್ನು ತಿಮಿಂಗಿಲದ ಅಂಬರ್‌ಗ್ರೀಸ್ ಎಂದು ಹೇಳಿ 10 ಲಕ್ಷ ರೂಪಾಯಿ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರ್ ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ನಿರಂಜನ್ ಎಸ್ (26), ಮಿಲನ್ ಮೋನಿಶ್ ಶೆಟ್ಟಿ (27), ಪೃಥ್ವಿ ಡಾಮಿಕ್ (31) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಸುಮಾರು 3 ಕೆ. ಜಿ 910 ಗ್ರಾಂ ತೂಕದ ತಿಮಿಂಗಿಲದ ಅಂಬರ್‌ಗ್ರೀಸ್‌ನಂತಿರುವ ವಸ್ತುವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ರೀತಿ ಮೇಣದಂತಹ ವಸ್ತುವಿಗೆ ತಿಮಿಂಗಿಲದ ಅಂಬರ್‌ಗ್ರೀಸ್ ಎಂದು ಸುಳ್ಳು ಹೇಳಿ ಸಾರ್ವಜನಿಕರನ್ನು ನಂಬಿಸಿ ಮೋಸ ಮಾಡುವ ಜಾಲವು ಸಕ್ರಿಯವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರುವಂತೆಯೂ ಹಾಗೂ ಈ ರೀತಿಯ ಯಾವುದೇ ಆಮಿಷಕ್ಕೆ ಒಳಗಾಗಬಾರದೆಂದು ಮತ್ತು ಈ ರೀತಿಯ ಯಾವುದೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.