ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ಏಕಗವಾಕ್ಷಿ ಯೋಜನೆಯಡಿ 2023 ರ ಜನವರಿ 1 ರಿಂದ ಜೂನ್ 30 ರ ಅವಧಿಯಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ, ಕಲೆ, ವಿಜ್ಞಾನ, ವೃತ್ತಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ಆದಾಯ ಉತ್ಪಾದನಾ ಯೋಜನೆ, ಸ್ಪರ್ಧಾತ್ಮಕ, ಪಠ್ಯ ಪುಸ್ತಕ, ಸಾಂದರ್ಭಿಕ ಮತ್ತು ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ ನವ ಸಾಕ್ಷರರ ಕೃತಿಗಳು ಮುಂತಾದ ವಿಷಯಗಳ ಕನ್ನಡ, ಆಂಗ್ಲ ಮತ್ತು ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕಗಳನ್ನು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಆಯ್ಕೆಗಾಗಿ ಸ್ವೀಕರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಲೇಖಕರು, ಲೇಖಕ-ಪ್ರಕಾಶಕರು, ಪ್ರಕಾಶಕರು ಮತ್ತು ಪ್ರಕಟಣಾ ಸಂಸ್ಥೆಗಳು ತಾವು ಪ್ರಕಟಿಸಿದ ಪುಸ್ತಕಗಳನ್ನು ಬೆಂಗಳೂರಿನ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಸ್ವಾಮ್ಯ ಕಾಯ್ದೆಯಡಿಯಲ್ಲಿ ಪ್ರತಿ ಗ್ರಂಥದ ಮೂರು ಪ್ರತಿಗಳನ್ನು ಮುಫತ್ತಾಗಿ ಸಲ್ಲಿಸಿ, ನೋಂದಣಿಯನ್ನು ಮಾಡಿಸಿರಬೇಕು.
ಅರ್ಜಿ ನಮೂನೆಗಾಗಿ ಇಲಾಖೆಯ www.dpl. karnataka. gov. in ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯಗಳನ್ನು ಸಂಪರ್ಕಿಸಬಹುದಾಗಿದೆ.
ಗ್ರಂಥಸ್ವಾಮ್ಯ ವಿಭಾಗದಲ್ಲಿ ಕಾಪಿರೈಟ್ ಮಾಡಿಸಿರುವ ಪುಸ್ತಕಗಳನ್ನು ಆಯ್ಕೆಗಾಗಿ ಜುಲೈ 31 ರ ಒಳಗೆ ಪುಸ್ತಕದ ಒಂದು ಪ್ರತಿ, ಕಾಪಿರೈಟ್‌ನ ನೋಂದಣಿಯ ದೃಢೀಕರಿಸಿದ ನಕಲು ಪ್ರತಿ ಹಾಗೂ ವಿತರಕರು ಸರಬರಾಜು ಹಕ್ಕನ್ನು ಪಡೆದಿದ್ದಲ್ಲಿ ಅದರ ನಕಲು ಪ್ರತಿಯನ್ನು ಅರ್ಜಿಯೊಂದಿಗೆ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಮುಖ್ಯ ಗೋಪುರ, ಡಾ. ಬಿ. ಆರ್ ಅಂಬೇಡ್ಕರ್ ವೀಧಿ, ಬೆಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು ಹಾಗೂ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.