ಉಡುಪಿ :ಜೀವನದಲ್ಲಿ ಅದಾವುದೋ ಕಾಲಘಟ್ಟದಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿ ಬೀದಿ ಪಾಲಾಗಿದ್ದ ಮಹಾರಾಷ್ಟ್ರ ಮೂಲದ ಅಜಯ್ (27) ಎಂಬ ಯುವಕನನ್ನು ಬೈಂದೂರಿನ ಸಾರ್ವಜನಿಕ ಸ್ಥಳದಿಂದ ರಕ್ಷಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅವರು, ಹೆಚ್ಚಿನ ಚಿಕಿತ್ಸೆ ಹಾಗೂ ಆಶ್ರಯಕ್ಕಾಗಿ ಮಂಜೇಶ್ವರದ ಸ್ನೇಹಾಯಲಕ್ಕೆ ಬುಧವಾರ ದಾಖಲಿಸಿದ್ದಾರೆ.
ಯುವಕ ಬೈಂದೂರು ಪೇಟೆಯ ಸಾರ್ವಜನಿಕ ಸ್ಥಳಗಳಲ್ಲಿ ಮಳೆಗಾಳಿಗೆ ಮೈಯೊಡ್ಡುತ್ತಾ, ತೀರಾ ಅಸಹಾಯಕ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದ. ಈ ಬಗ್ಗೆ ಇಲಾಖೆಯಿಂದ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಯುವಕನನ್ನು ತನ್ನ ವಶಕ್ಕೆ ಪಡೆದರು.
ವಿಶು ಶೆಟ್ಟಿ ಅವರ ಮನವಿ ಮೇರೆಗೆ ಕಾಸರಗೋಡು ಮಂಜೇಶ್ವರದ ಸ್ನೇಹಾಲಯದ ಮುಖ್ಯಸ್ಥ ಶ್ರೀಯುತ ಜೋಸೆಫ್ ಕ್ರಾಸ್ತಾ ಅವರು ಸಕರಾತ್ಮಕವಾಗಿ ಸ್ಪಂದಿಸಿ ಯುವಕನಿಗೆ ಚಿಕಿತ್ಸೆ ಹಾಗೂ ಆಶ್ರಯ ನೀಡಲು ಒಪ್ಪಿದ್ದಾರೆ.
ವಿಶು ಶೆಟ್ಟಿ ಅವರು ತಕ್ಷಣ ಯುವಕನನ್ನು ತನ್ನ ವಾಹನದಲ್ಲಿಯೇ ಮಂಜೇಶ್ವರಕ್ಕೆ ಕರೆದೊಯ್ದು ಆಶ್ರಮಕ್ಕೆ ದಾಖಲಿಸಿ ನೈಜ ಸೇವಾ ಧರ್ಮವನ್ನು ಮೆರೆದಿದ್ದಾರೆ. ಕಾರ್ಯಾಚರಣೆಗೆ ಬೈಂದೂರು ಠಾಣಾಧಿಕಾರಿ ಸಹಕಾರ ನೀಡಿದರು. ಠಾಣೆಯ ಪೊಲೀಸ್ ಮಲ್ಲಪ್ಪ ದೇಸಾಯಿ ಹಾಗೂ ಸಾಮಾಜಿಕ ಕಾರ್ಯಕರ್ತ ಉದ್ಯಾವರ ರಾಮದಾಸ್ ಪಾಲನ್ ನೆರವಾದರು.
ಯುವಕನ ಈ ಪರಿಸ್ಥಿತಿಗೆ ಏನು ಕಾರಣ ಎಂಬ ಮಾಹಿತಿ ಲಭ್ಯವಾಗಿಲ್ಲ. ಯುವಕನಿಗೆ ಚಿಕಿತ್ಸೆ ಹಾಗೂ ಆಶ್ರಯ ನೀಡಲು ಒಪ್ಪಿದ ಸ್ನೇಹಾಲಯದ ಮುಖ್ಯಸ್ಥ ಶ್ರೀಯುತ ಜೋಸೆಫ್ ಕ್ರಾಸ್ತಾ ಅವರಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.
ಯುವಕನ ವಾರೀಸುದಾರರು ಯಾರಾದರೂ ಇದ್ದಲ್ಲಿ ಕೂಡಲೇ ಬೈಂದೂರು ಠಾಣೆ ಅಥವಾ ಮಂಜೇಶ್ವರದ ಸ್ನೇಹಾಲಯವನ್ನು ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಲಾಗಿದೆ
———