ನಾಪತ್ತೆಯಾಗಿದ್ದ ವ್ಯಕ್ತಿ ಹೊಳೆಯಲ್ಲಿ ಶವವಾಗಿ ಪತ್ತ
ಕಾರ್ಕಳ :ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ರಾಜು ಎಂಬವರ ಶವ ನಿಟ್ಟೆ ಗ್ರಾಮದ ಪರಪಾಡಿ ಹೊಳೆಯಲ್ಲಿ ಪತ್ತೆಯಾಗಿದೆ.
ರಾಜು ವೃತ್ತಿಯಲ್ಲಿ ಚಾಲಕರಾಗಿ ದುಡಿಯುತ್ತಿದ್ದು ಬುಧವಾರ ಮುಂಜಾನೆ ತನ್ನ ಮನೆಯಿಂದ ಹೊರಹೋದವರು ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮನೆಯವರು ಸಾಕಷ್ಟು ಹುಡುಕಾಟ ನಡೆಸಿದರೂ ರಾಜು ಅವರು ಸುಳಿವು ಸಿಕ್ಕಿರಲಿಲ್ಲ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದ ರಾಜು ಅವರು ಪರಪಾಡಿ ಹೊಳೆಗೆ ಕಾಲು ಜಾರಿ ಬಿದ್ದು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಾಯದೊಂದಿಗೆ ಶವವನ್ನು ಮೇಲಕ್ಕೆತ್ತಿದ್ದು, ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.