ಕಾರ್ಕಳ ತಾಲೂಕು ಅಂಗನವಾಡಿ ಒಕ್ಕೂಟದ ವತಿಯಿಂದ ವೇತನ ಹೆಚ್ಚಳ ಹಾಗೂ ಇ-ಸಮೀಕ್ಷೆಯಿಂದ ಅಂಗನವಾಡಿ ಕಾರ್ಯಕರ್ತೆಯರನ್ನು ಕೈಬಿಡಬೇಕೆಂದು ಒತ್ತಾಯಿಸಿ ನೂರಾರು ಕಾರ್ಯಕರ್ತೆಯರು ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಕಾರ್ಕಳ ತಾಲೂಕು ಅಂಗನವಾಡಿ ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ 15 ಸಾವಿರ ಹಾಗೂ ಸಹಾಯಕಿಯರಿಗೆ 10 ಸಾವಿರ ವೇತನ ನೀಡುವುದಾಗಿ ಭರವಸೆ ನೀಡಿತ್ತು. ಇದೀಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು. ಅಲ್ಲದೇ ಅಂಗನವಾಡಿ ಕಾರ್ಯಕರ್ತೆಯರನ್ನು ಇ-ಸಮೀಕ್ಷೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಇದಲ್ಲದೇ ಕಾರ್ಯಕರ್ತೆಯರ ಸೇವಾ ಹಿರಿತನಕ್ಕೂ ಬೆಲೆಯಿಲ್ಲದಂತಾಗಿದ್ದು, 35 ವರ್ಷಗಳಿಂದ ಸೇವೆ ಸಲ್ಲಿಸುವವರಿಗೂ ಹೊಸದಾಗಿ ಸೇರ್ಪಡೆಯಾಗುವವರಿಗೂ ಒಂದೇ ರೀತಿಯ ವೇತನ ಪಾವತಿಸಲಾಗುತ್ತಿದ್ದು, ಸೇವಾ ಹಿರಿತನಕ್ಕೂ ಸರ್ಕಾರ ಬೆಲೆ ನೀಡಿಲ್ಲ.
ಇದಲ್ಲದೇ ನಮ್ಮನ್ನು ಸರ್ಕಾರಿ ನೌಕರರ ರೀತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಆದರೆ, ಯಾವುದೇ ಸೇವಾ ಭದ್ರತೆಯಿಲ್ಲದೇ, ಕನಿಷ್ಟ ವೇತನವನ್ನೂ ನೀಡದೆ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗೌರವಧನ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಈ ಬಜೆಟ್ ಅಧಿವೇಶನದಲ್ಲಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಂಗನವಾಡಿಗಳನ್ನು ಮುಚ್ಚಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದೆಂದು ಎಚ್ಚರಿಸಿದರು.
ಸರ್ವಜ್ಞ ವೃತ್ತದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ಬಂದ ಕಾರ್ಯಕರ್ತೆಯರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.