ಹೆಬ್ರಿ: ಹೆಬ್ರಿ ಅಮೃತ ಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆಯನ್ನು ಅನ್ನಪೂರ್ಣ ಸಭಾಂಗಣದಲ್ಲಿ ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಹೆಬ್ಬಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಲು ಆರಂಭಿಸಬೇಕು. ದೇಶ ಸೇವೆಗೆ ಯುವಕರು ಮುಂದಾಗಬೇಕು. ಅಲ್ಲದೆ ತ್ಯಾಗ ಮನೋಭಾವದಿಂದ ಕೂಡಿ ಸಮಾಜದ ಸೇವೆ ಮಾಡಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ಪ್ರತಿಜ್ಞಾ ವಿಧಿ ಬೋಧಿಸಿದ ಅಮೃತಭಾರತಿ ವಿದ್ಯಾಲಯದ ಅಧ್ಯಕ್ಷರಾದ ಶೈಲೇಶ್ ಕಿಣಿ ಮಾತನಾಡಿ, ನಾಯಕತ್ವ ಸ್ಥಾನದಲ್ಲಿರುವವರು ಸಿಹಿ ಕಹಿ ಎರಡನ್ನೂ ಒಟ್ಟಿಗೆ ಸ್ವೀಕರಿಸುವ ಮನೋಭಾವ ಹೊಂದಿರಬೇಕು ಹಾಗೂ ಈ ಸಂಸತ್ ರಚನೆ ಎಲ್ಲರಿಗೂ ಮಾದರಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಗುರುದಾಸ್ ಶೆಣೈ, ರಾಮಕೃಷ್ಣ ಆಚಾರ್ಯ, ವಿಷ್ಣುಮೂರ್ತಿ ನಾಯಕ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಹಾಗೂ ಪ್ರಾಥಮಿಕ ವಿಭಾಗದ ಉಪ ಮುಖ್ಯೋಪಾಧ್ಯಾಯಿನಿ ಪ್ರತಿಮಾ ಉಪಸ್ಥಿತರಿದ್ದರು. ಸಮಾಜ ವಿಜ್ಞಾನ ಶಿಕ್ಷಕ ಸುಮನ್ ನಾಯಕ್ ವಿದ್ಯಾರ್ಥಿ ಸಂಸತ್ತಿನ ಪಟ್ಟಿ ವಾಚಿಸಿದರು. ಆಶಾ ಜ್ಯೋತಿ ಸ್ವಾಗತಿಸಿ, ಸುರೇಖಾ ಮಾತಾಜಿ ವಂದಿಸಿ, ಕನ್ನಡ ಶಿಕ್ಷಕ ಮಹೇಶ್ ಹೈಕಾಡಿ ನಿರೂಪಿಸಿದರು.