ಹೆಬ್ರಿ : ಕಜ್ಕೆಯಲ್ಲಿರುವ ಹಾಸನ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾಸಂಸ್ಥಾನದ ಶಾಖಾ ಮಠದಲ್ಲಿ ಜುಲೈ 03ರಿಂದ ಸೆಪ್ಟೆಂಬರ್ 29ರ ತನಕ ನಡೆಯಲಿರುವ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿಗಳವರ 41ನೇ ಚಾತುರ್ಮಾಸ್ಯ ವೃತಾನುಷ್ಠಾನದ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀ ಅನ್ನಪೂರ್ಣೇಶ್ವರಿ ವೇದಿಕೆಯ ಶ್ರೀ ಸುಜ್ಞಾನ ಮಂಟಪದಲ್ಲಿ ಭಾನುವಾರ ಮೂಡಬಿದರೆ ಎಸ್‌ಕೆಎಫ್ ಉದ್ಯಮ ಸಮೂಹದ ಆಡಳಿತ ನಿರ್ದೇಶಕ ಡಾ.ಜಿ.ರಾಮಕೃಷ್ಣ ಆಚಾರ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ಭಕ್ತ ಸಮೂಹ ಸೇರಿ ಕಜ್ಕೆ ಶ್ರೀಮಠದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣದ ಪುಣ್ಯ ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಅತ್ಯಂತ ಶ್ಲಾಘನೀಯ. ಎಲ್ಲರ ಕೈ ಸೇರಿದಾಗ ಮಾತ್ರ ಮಹತ್ವದ ಸೇವೆ ಮಾಡಲು ಸಾಧ್ಯವಿದೆ. ಮುಂದಿನ ವರ್ಷಾರಂಭದಲ್ಲಿ ಬ್ರಹ್ಮಕಲಶೋತ್ಸವ ನಡೆಸುವ ಸಂಕಲ್ಪ ಹೊಂದಿದ್ದೇವೆ. ಸಾಮಾನ್ಯ ಭಕ್ತರೇ ದೇವಸ್ಥಾನದ ಆಸ್ತಿ ಎಂದು ಹೇಳಿದರು
ಒಳ್ಳೇಯ ಮನಸ್ಸು ಇದ್ದಾಗ ಮಾತ್ರ ಒಳ್ಳೇಯ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂಬುದಕ್ಕೆ ಕಜ್ಕೆ ಶ್ರೀಮಠದಲ್ಲಿ ಗುರುಸೇವೆ ಮಾಡುವ ನಿಸ್ವಾರ್ಥ ಮನಸ್ಸಿನ ತಂಡವೇ ಸಾಕ್ಷಿ ಎಂದು ಡಾ.ಜಿ.ರಾಮಕೃಷ್ಣ ಆಚಾರ್ ಹೇಳಿದರು.
ಅನಂತಶ್ರೀ ವಿಭೂಷಿತ ಶ್ರೀ ಶಿವಸುಜ್ಜಾನತೀರ್ಥ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಹೃದಯ ಶ್ರೀಮಂತಿಕೆಯ ಸಾಮಾನ್ಯ ಭಕ್ತ ಸಮೂಹವೇ ಕಜ್ಕೆಯಲ್ಲಿ ಎಲ್ಲರ ಸಹಕಾರದಲ್ಲಿ ದೇವಸ್ಥಾನ ನಿರ್ಮಾಣದ ಹೊಣೆ ಹೊತ್ತಿರುವುದು ಅತ್ಯಂತ ಸಂತಸ ತಂದಿದೆ, ಧರ್ಮ ಬಿಟ್ಟು ನಡೆದಾಗ ಬದುಕು ಅನರ್ಥವಾಗುತ್ತದೆ. ನಾವು ಧರ್ಮದಲ್ಲಿ ನಡೆದು ಚಾತುರ್ಮಾಸದಲ್ಲಿ ಸೇವೆ ಮಾಡಿದ ಬದುಕು ಪಾವನವಾಗುತ್ತದೆ ಎಂದರು.
೪೧ನೇ ಚಾತುರ್ಮಾಸ್ಯ ವೃತ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಲ್ಗೋಳಿ ವಿಶ್ವನಾಥ ಆಚಾರ್ಯ ಅಧ್ಯಕ್ಷತೆ ವಹಿಸಿ ಚಾತುರ್ಮಾಸ ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ ಕೋರಿದರು.
ವೇಲಾಪುರಿ ವಿಶ್ವನಾಥ ಶರ್ಮ ಧಾರ್ಮಿಕ ಉಪನ್ಯಾಸ ನೀಡಿದರು. ಮಾರಾಳಿ ಮಹಾಗಣಪತಿ ದೇವಸ್ಥಾನದ ಅರ್ಚಕ ಬಾಲಕೃಷ್ಣ ಕರಬ ಶುಭಾಶಂಸನೆ ಮಾಡಿದರು.