ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ‘ ಯೋಜನೆ ಇಂದಿನಿಂದ (ಜು.1) ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಲಾಗಿದೆ.
ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯ ಹೊರತಾಗಿ ರಾಜ್ಯ ಸರ್ಕಾರದಿಂದ ಐದು ಕೆಜಿ ಅಕ್ಕಿಯ ಬದಲು ತಕ್ಷಣಕ್ಕೆ ಹಣ ನೀಡಲು ಉದ್ದೇಶಿಸಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಬಿಪಿಎಲ್ ಕಾರ್ಡ್ದಾರರ ಖಾತೆಗೆ ಹಣ ಜಮಾ ಆಗಲಿದೆ.
ಅಕ್ಕಿ ದಾಸ್ತಾನು ಸಂಗ್ರಹವಾಗುವವರೆಗೆ ಪ್ರತಿಕೆಜಿಗೆ 34 ರೂಪಾಯಿಯಂತೆ ಹಣ ನೀಡಲಾಗುವುದು. ಅಕ್ಕಿ ಬದಲಿಗೆ ಹಣ ಎಷ್ಟು ತಿಂಗಳು ನೀಡಲಾಗುವುದು ಎಂಬುದನ್ನು ಈಗಲೇ ಹೇಳುವುದಿಲ್ಲ. ಅಕ್ಕಿ ಪೂರೈಕೆಯಾಗದ ಕಾರಣ ಇದು ಕೇವಲ ತಾತ್ಕಾಲಿಕ ವ್ಯವಸ್ಥೆ ಆಗಿದ್ದು ಮಾತು ಕೊಟ್ಟಂತೆ ಜುಲೈ 1ರಿಂದ ಯೋಜನೆ ಜಾರಿಯಾಗಲಿದೆ. ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಯಾರು ಖಾತೆ ತೆರೆದಿಲ್ಲವೋ ಅಂತಹವರು ಬ್ಯಾಂಕ್ ಖಾತೆ ತೆರೆಯಬೇಕಾಗುತ್ತದೆ ಎಂದು .ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾಹಿತಿ ನೀಡಿದ್ದಾರೆ.