ಮಣಿಪಾಲ : ಅತ್ಯುನ್ನತ ಗುಣಮಟ್ಟದ ಶಿಕ್ಷಣಕ್ಕಾಗಿ ಪ್ರತಿಷ್ಠಿತ ಏಷ್ಯಾದ ‘ಡಿಜಿಟಲ್ ಇನ್ನೋವೇಷನ್ ಅವಾರ್ಡ್-2023’ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಗೆದ್ದುಕೊಂಡಿದೆ.
ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠ ತಂತ್ರಜ್ಞಾನ ಅಥವಾ ಡಿಜಿಟಲ್ ಇನ್ನೋವೇಷನ್‌ನ್ನು ಉನ್ನತ ಶಿಕ್ಷಣದಲ್ಲಿ ಅಳವಡಿಸಿಕೊಂಡ ವಿ ವಿ ಗೆ ‘ದಿ ಅವಾರ್ಡ್ ಏಷ್ಯಾ 2023’ನ್ನು ನೀಡಿ ಗೌರವಿಸಲಾಗುತ್ತದೆ. ಇದೀಗ ಈ ಪ್ರಶಸ್ತಿಯನ್ನು ಮಾಹೆ ಗೆದ್ದುಕೊಂಡಿದೆ. ಏಷ್ಯಾ ವಲಯದಲ್ಲಿ ಉನ್ನತ ಶಿಕ್ಷಣದಲ್ಲಿ ವಿಶಿಷ್ಟ ಸಾಧನೆ ಮಾಡಿದ ಶಿಕ್ಷಣ ಸಂಸ್ಥೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ವರ್ಷ 20 ದೇಶಗಳ 220ಕ್ಕೂ ಅಧಿಕ ವಿವಿಗಳು ಈ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು.ವಿವಿಧ ಕ್ಷೇತ್ರಗಳ ಸ್ವತಂತ್ರ ತೀರ್ಪುಗಾರರನ್ನೊಳಗೊಂಡ ಪ್ಯಾನೆಲ್ ತಂತ್ರಜ್ಞಾನ ಅಥವಾ ಡಿಜಿಟಲ್ ಇನ್ನೋವೇಷನ್ ವಿಭಾಗದಲ್ಲಿ ಮಾಹೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳ ಪರೀಕ್ಷಾ ಕ್ರಮದಲ್ಲಿ ವಿವಿ ನೂತನವಾಗಿ ಅಳವಡಿಸಿದ ‘ಇ-ಪ್ಯಾಡ್’ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಪ್ಯಾನೆಲ್ ಅಭಿಪ್ರಾಯಪಟ್ಟಿದೆ. ವಿದ್ಯಾರ್ಥಿಗಳು ಇ-ಪ್ಯಾಡ್ ಬಳಸಿ ಪರೀಕ್ಷೆಯ ಉತ್ತರಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ಕಳುಹಿಸುವ ಅವಕಾಶವಿದೆ. ಈ ಮೂಲಕ ಡಿಜಿಟಲ್ ತಂತ್ರಜ್ಞಾನದ ಶಕ್ತಿಯನ್ನು ತೋರಿಸಿಕೊಟ್ಟಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಹಾಂಗ್‌ಕಾಂಗ್‌ನ ಟೈಮ್ಸ್ ಹೈಯರ್ ಎಜ್ಯುಕೇಷನ್ ಏಷ್ಯಾ ವಿವಿ ಸಮಿಟ್‌ನಲ್ಲಿ ನಡೆಯಿತು. ಏಷ್ಯದ ಖ್ಯಾತನಾಮ ಶಿಕ್ಷಣ ತಜ್ಞರು, ಗಣ್ಯ ನಾಯಕರು ಹಾಗೂ ಉನ್ನತ ಶಿಕ್ಷಣ ಕ್ಷೇತ್ರದ ಪರಿಣಿತರು ಪಾಲ್ಗೊಂಡಿದ್ದರು.