ಕುಂದಾಪುರ: ಮನೆಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದ ಪರಿಣಾಮ ಅವರು ಗಾಯಗೊಂಡು ಚಿಕಿತ್ಸೆಗಾಗಿ ಸೇರ್ಪಡೆಯಾದ ಘಟನೆ ಗುರುವಾರ ರಾತ್ರಿ ಕೊಲ್ಲೂರು ಸಮೀಪ ನಡೆದಿದೆ.
ಗಾಯಗೊಂಡಿರುವ ವ್ಯಕ್ತಿಯನ್ನು ಕೊಲ್ಲೂರು ಸಮೀಪದ ನಾಗೋಡಿ ಚೆಕ್‌ಪೋಸ್ಟ್ ಸಮೀಪದ ಮರಾಠಿ ಗ್ರಾಮದ ಕಂಚಿಕೇರಿ ಎಂಬಲ್ಲಿನ ನಿವಾಸಿ ಗಣೇಶ್(48) ಎಂದು ಗುರುತಿಸಲಾಗಿದೆ.
ಗುರುವಾರ ರಾತ್ರಿ ಗಣೇಶ್ ಮನೆಯಲ್ಲಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ಮನೆಯ ಎದುರಿಗಿದ್ದ ನಾಯಿಯನ್ನು ಭೇಟೆಯಾಡಲು ಬಂದಿದ್ದ ಚಿರತೆಯ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ನಾಯಿ ಗಾಬರಿಗೊಂಡು ಕಿಟಕಿ ಮೂಲಕ ಮನೆಯೊಳಕ್ಕೆ ಪ್ರವೇಶಿಸಿದೆ.
ನಾಯಿಯನ್ನು ಬೆನ್ನತ್ತಿ ಬಂದ ಚಿರತೆಯೂ ಮನೆಯೊಳಗೆ ನುಗ್ಗಿದೆ. ಈ ವೇಳೆ ತನ್ನ ಭೇಟೆಯನ್ನು ಬಿಟ್ಟು ಚಿರತೆ ಗಣೇಶ್ ಅವರ ಮೇಲೆ ದಾಳಿ ನಡೆಸಿದ್ದರಿಂದಾಗಿ, ಗಣೇಶ್ ಅವರ ಕೈಗೆ ತೀವ್ರ ಗಾಯಗಳಾಗಿವೆ. ದೂರವಾಣಿ ಕರೆಗೆ ಸ್ಪಂದಿಸಿದ ಆಲೂರಿನ ಆಂಬ್ಯುಲೆನ್ಸ್ ವಾಹನದ ಸಿಬ್ಬಂದಿ ರಾಘವೇಂದ್ರ, ಅಶೋಕ್ ಅವರ ಸಹಕಾರದಿಂದ ಗಾಯಾಳುವನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಗುರುವಾರ ರಾತ್ರಿ ನಡೆದ ಈ ಘಟನೆ ಮೊದಲಿಗೆ ಹುಲಿಯ ದಾಳಿ ಎಂದು ಸುದ್ದಿಯಾಗಿದ್ದರೂ, ಬಳಿಕ ಚಿರತೆಯ ದಾಳಿ ಎನ್ನುವುದು ಧೃಢವಾಗಿದೆ.