ಬೆಂಗಳೂರು: ಜೂ. 28ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ ನೀಡಬೇಕಿರುವ ಅಕ್ಕಿಯ ಬದಲಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. . ಜು. 1ರಿಂದಲೇ ಬಿಪಿಎಲ್ ಕಾರ್ಡ್ ದಾರರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ನಿರ್ಧರಿಸಲಾಗಿದೆ.
ಈ ಯೋಜನೆಯು ಬಿಪಿಎಲ್ ಕಾರ್ಡುದಾರರಿಗೆ ಮಾತ್ರವೇ ಅನ್ವಯವಾಗುತ್ತದೆ.ಕೇಂದ್ರ ಸರ್ಕಾರದ ಅಕ್ಕಿ ಬಿಟ್ಟು ರಾಜ್ಯ ಸರ್ಕಾರವು ಕೊಡಬೇಕಿದ್ದ ಉಚಿತ ಅಕ್ಕಿಯ ಯೋಜನೆಯ ಬದಲಿಗೆ ಮಾತ್ರ ಲೆಕ್ಕಾಚಾರ ಅನ್ವಯವಾಗುತ್ತದೆ. ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿಯನ್ನು ನಿಗದಿಪಡಿಸಲಾಗಿದ್ದು, ಅದರಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ.ಗಳಂತೆ ಪ್ರತಿ ಕುಟುಂಬಕ್ಕೆ 170 ರೂ.ಗಳನ್ನು ನೀಡಲು ತೀರ್ಮಾನಿಸಲಾಗಿದೆ.
ಅದೇ ಲೆಕ್ಕದಲ್ಲಿ ಕೆಜಿ ಅಕ್ಕಿಗೆ 34 ರೂ.ಗಳಂತೆ, 5 ಕೆಜಿ ಅಕ್ಕಿ ಪಡೆಯುವ ಕುಟುಂಬಕ್ಕೆ 150 ರೂ., 10 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 340 ರೂ. ಹಾಗೂ 25 ಕೆಜಿ ಅಕ್ಕಿಯನ್ನು ಪಡೆಯುವ ಕುಟುಂಬಕ್ಕೆ 850 ರೂ.ಗಳನ್ನು ನೀಡಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಪ್ರತಿ ಬಿಪಿಎಲ್ ಕುಟುಂಬದ ಕಾರ್ಡ್ ಗಳಲ್ಲಿ ಮನೆಯ ಯಜಮಾನಿ ಯಾರು ಎಂದು ನಮೂದಾಗಿರುತ್ತದೋ ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಪ್ರತಿ ಬಿಪಿಎಲ್ ಕಾರ್ಡುದಾರರ ಮಾಹಿತಿ ಸರ್ಕಾರದ ಬಳಿಯಿದೆ. ಕಾರ್ಡ್ ಗಳಲ್ಲಿ ಪ್ರಮುಖವಾಗಿ ಉಲ್ಲೇಖವಾಗಿರುವವರ ಹೆಸರು, ಅವರ ಬ್ಯಾಂಕ್ ಖಾತೆಗಳ ವಿವರಗಳ ಆಧಾರದಲ್ಲಿ ಸರ್ಕಾರ ಹಣ ಜಮೆ ಮಾಡುತ್ತದೆ ಎಂದು ಮುನಿಯಪ್ಪ ತಿಳಿಸಿದ್ದಾರೆ.
ಸೂಕ್ತ ಪ್ರಮಾಣದ ಅಕ್ಕಿ ಸಿಗುವುದು ಖಾತ್ರಿಯಾದ ನಂತರ ಹಣದ ಬದಲು ಅಕ್ಕಿಯನ್ನು ಕೊಡಲು ನಿರ್ಧರಿಸಿದ್ದೇವೆ.ಈಗ ಸದ್ಯದ ಮಟ್ಟಿಗೆ ತಾತ್ಕಾಲಿಕವಾಗಿ ಅಕ್ಕಿಯ ಬದಲಿಗೆ ಹಣವನ್ನು ಕೊಡುವ ನಿರ್ಧಾರವನ್ನು ಮಾಡಲಾಗಿದೆ.ಸರ್ಕಾರ ಅಕ್ಕಿ ಖರೀದಿ ಪ್ರಯತ್ನವನ್ನು ಮುಂದುವರಿಸುತ್ತದೆ , ಅಲ್ಲಿಯವರೆಗೆ ಬಡವರು ಕಾಯುವುದು ಬೇಡ ಎಂಬ ಉದ್ದೇಶದಿಂದ ಸದ್ಯಕ್ಕೆ ಅಕ್ಕಿಯ ಬದಲು ಹಣವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.