ಶಿರ್ವ: ಮುಂಬಯಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕಳೆದ ಒಂದು ವರ್ಷದಿಂದ ತನ್ನ ಚಿಕ್ಕಮ್ಮನ ಮನೆ ಶಿರ್ವ ಮುಖ್ಯರಸ್ತೆ ಬಳಿಯ ಕುಡ್ತಮಜಲು ಎಂಬಲ್ಲಿ ವಾಸವಾಗಿದ್ದ ಶ್ರದ್ಧಾ (21) ಜೂ. 13 ರಂದು ಬೆಳಗ್ಗೆ 9 ಗಂಟೆಯಿಂದ ಮನೆಯಿಂದ ಹೋದವರು ವಾಪಾಸು ಬಾರದೆ ಕಾಣೆಯಾಗಿದ್ದಾರೆ.
ಈಕೆಯ ಚಿಕ್ಕಮ್ಮ ಕುಡ್ತಮಜಲು ನಿವಾಸಿ ಗೌರಿ ಜೂ. 13 ರಂದು ಬೆಳಗ್ಗೆ 9 ಗಂಟೆಗೆ ಕೆಲಸದ ನಿಮಿತ್ತ ಶಾಲೆಗೆ ಹೋಗಿದ್ದು, ಮಧ್ಯಾಹ್ನ 2 ಗಂಟೆಗೆ ಮನೆಗೆ ಬಂದಾಗ ಆಕೆ ಕಾಣೆಯಾಗಿದ್ದಳು.ಮನೆಯಲ್ಲಿ ಆಕೆ ಹಿಂದಿಯಲ್ಲಿ ಬರೆದ ಪತ್ರ ದೊರೆತಿದ್ದು, ಅದರಲ್ಲಿ ತಾನು ಇಲ್ಲಿಗೆ ಬಂದು 1 ವರ್ಷವಾಗಿದ್ದು,ಇಷ್ಟು ಸಮಯ ನನ್ನನ್ನು ನೋಡಿದ್ದಕ್ಕೆ ಕೃತಜ್ಞತೆಗಳು. ಪೂನಾಕ್ಕೆ ಟೀಚರ್ ಕೆಲಸಕ್ಕೆ ಹೋಗುತ್ತಿದ್ದೇನೆ. ನಾನು ಕಾಣೆಯಾದ ಬಗ್ಗೆ ಪೊಲೀಸ್ ಕೇಸ್ ಮಾಡುವುದು ಬೇಡ, ನನ್ನ ಬಗ್ಗೆ ಚಿಂತೆ ಮಾಡಬೇಡಿ, ನಾನು ಯಾರಿಗೂ ಭಾರವಾಗಿರುವುದು ನನಗೆ ಇಷ್ಟವಿಲ್ಲ ಎಂದು ಬರೆದಿದ್ದಾಳೆ.
ಸಂಬಂಧಿಕರ ಸಹಿತ ಎಲ್ಲಾ ಕಡೆ ಹುಡುಕಾಡಿದ್ದು, ಈವರೆಗೆ ಪತ್ತೆಯಾಗಿರುವುದಿಲ್ಲ ಎಂದು ಆಕೆಯ ಚಿಕ್ಕಮ್ಮ ಗೌರಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.