ಉಡುಪಿ: ಫ್ರೀ ಓನ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ವತಿಯಿಂದ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎನ್ನಲಾದ ಔಷಧೀಯ ಗುಣವುಳ್ಳ ಲಕ್ಷಣ ಫಲ ಹಾಗೂ ಇನ್ನಿತರ ಔಷಧೀಯ ಸಸ್ಯಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಗುರುವಾರದಂದು ಭುಜಂಗ ಪಾರ್ಕಿನಲ್ಲಿ ನಡೆಯಿತು
ನಗರಸಭೆ ಪೌರಾಯುಕ್ತ ರಮೇಶ್ ಪಿ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪರಿಸರ ದಿನವನ್ನು ಕೇವಲ ಒಂದು ದಿನದ ಮಟ್ಟಿಗೆ ಆಚರಿಸದೆ ವರ್ಷಪೂರ್ತಿ ಆಚರಿಸುವ ಕಾರ್ಯಕ್ಕೆ ಮುಂದಾಗಿರುವುದು ಅತ್ಯುತ್ತಮ ವಿಚಾರ. ಜಿಲ್ಲೆಯಾದ್ಯಂತ 1000 ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಸಂಘದ ವತಿಯಿಂದ ನಡೆಯುತ್ತಿರುವುದು ಅಭಿನಂದನಾರ್ಹ. ಗಿಡಗಳನ್ನು ನೆಡುವುದು ದೊಡ್ಡದಲ್ಲ, ಆದರೆ ನೆಟ್ಟ ಗಿಡವನ್ನು ಪೋಷಿಸಿ ಬೆಳೆಸುವುದು ಮುಖ್ಯ ಎಂದರು.ಮನೆಗೊಂದು ಗಿಡ ನೆಡುವ ಕಾರ್ಯ ನಮ್ಮಿಂದ ಆಗಬೇಕು. ಮರಗಳ ಹನನ, ವಾಹನ-ಕಾರ್ಖಾನೆಗಳ ಮಾಲಿನ್ಯ, ಪ್ಲಾಸ್ಟಿಕ್ ಕಾರಣದಿಂದಾಗಿ ಪರಿಸರದ ಮೇಲೆ ದುಷ್ಪರಿಣಾಮವಾಗಿ ಇವತ್ತು ಉಡುಪಿಯಂತಹ ಊರಿನಲ್ಲೂ ಕುಡಿಯುವ ನೀರಿಗೆ ಬರದಂತಹ ಪರಿಸ್ಥಿತಿ ಬಂದೊದಗಿದೆ. ಪರಿಸರ ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿಯಾಗಿದ್ದು, ಇದು ಮುಂದಿನ ಪೀಳಿಗೆಗೆ ನಾವು ನೀಡುವ ಅತಿ ದೊಡ್ಡ ಕೊಡುಗೆ ಎಂದರು.
ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಆಚಾರ್ಯ ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿ ಪರಿಸರ ರಕ್ಷಣೆಯ ಮಹತ್ವ ತಿಳಿಸಿದರು. ಸಾರ್ವಜನಿಕರು ಒಂದು ಗಿಡ ನೆಟ್ಟು ಮೂರು ವರ್ಷಗಳವರೆಗೆ ಪೋಷಿಸಿದಲ್ಲಿ ಇಲಾಖೆಯ ವತಿಯಿಂದ ಒಂದು ಮರಕ್ಕೆ 125ರೂ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಮಾಹಿತಿ ನೀಡಿ ಮರಗಳನ್ನು ಅನಾವಶ್ಯಕವಾಗಿ ಕಡಿಯಬಾರದು ಎಂದು ಕಿವಿ ಮಾತು ಹೇಳಿದರು.ಪ್ರತಿಯೊಬ್ಬರೂ ತಮಗೆ ಡಿ.ಎಲ್ ಸಿಕ್ಕಿದ್ದಾಗ ಅಥವಾ ತಾವು ಹೊಸಕಾರು ಕೊಂಡಾಗ ಕನಿಷ್ಠ ಒಂದು ಗಿಡವನ್ನು ನೆಟ್ಟು ಪೋಷಿಸುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದು ಆರ್.ಟಿ.ಓ ಸಾರಿಗೆ ಅಧಿಕಾರಿ ರವಿ ಶಂಕರ್ ಪಿ ಹೇಳಿದರು..
ಪರಿಸರ ರಕ್ಷಣೆಯ ಮಹತ್ವ ಪರಿಸರ ಪ್ರೇಮಿಗಳಾದ ವೈದ್ಯ ಡಾ. ಮನೋಹರ್ ಬೋಳಾರ್, ಮಧುಸೂಧನ್ ಹೇರೂರು ಹಾಗೂ ರಾಘವೇಂದ್ರ ಪ್ರಭು ಕರ್ವಾಲ್ ತಿಳಿಸಿದರು.
ಫ್ರೀ ಓನ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಿಗೆ 1000 ಗಿಡಗಳನ್ನು ಉಚಿತವಾಗಿ ನೀಡುವುದು ಮಾತ್ರವಲ್ಲದೆ ಈ ಗಿಡಗಳನ್ನು ಪೋಷಿಸಿ ಆರೈಕೆ ಮಾಡಲಾಗುವುದು. ಗಿಡಗಳನ್ನು ಪಡೆದು ಅತ್ಯುತ್ತಮ ರೀತಿಯಲ್ಲಿ ನೆಟ್ಟು ಪೋಷಿಸುವ ವ್ಯಕ್ತಿ, ಶಾಲೆ-ಕಾಲೇಜು ಅಥವಾ ಸಂಘ ಸಂಸ್ಥೆಗಳಿಗೆ ಮುಂದಿನ ವರ್ಷ ಸಂಘದ ವತಿಯಿಂದ ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು.ಸಂಘದ ಕಾರ್ಯದರ್ಶಿ ಉದಯ್ ಕಿರಣ್ ನಿರೂಪಿಸಿ ವಂದಿಸಿದರು.ಫ್ರೀ ಓನ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ಸಂಘದ ಪದಾಧಿಕಾರಿಗಳು ಹಾಜರಿದ್ದರು.