ಮಣಿಪಾಲ:ಸುರಕ್ಷಿತ ರಕ್ತ ಮತ್ತು ರಕ್ತ ವರ್ಗಾವಣೆಗಾಗಿ ಉತ್ಪನ್ನಗಳ” ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಕ್ತ ಸಂಬಂಧಿತ ಉತ್ಪನ್ನಗಳು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕವಾಗಿವೆ. ಈ ದಿನವು ಸ್ವಯಂಸೇವಕರು ಮತ್ತು ರಕ್ತದಾನಿಗಳಿಗೆ ಅವರ ಕೊಡುಗೆಗಳಿಗಾಗಿ ಧನ್ಯವಾದ ಹೇಳುವ ಅವಕಾಶವನ್ನು ಸೂಚಿಸುತ್ತದೆ. 2023 ರ ಘೋಷ ವಾಕ್ಯ “ರಕ್ತ ನೀಡಿ, ಪ್ಲಾಸ್ಮಾ ನೀಡಿ, ಜೀವನವನ್ನು ಹಂಚಿಕೊಳ್ಳಿ, ಆಗಾಗ ಹಂಚಿಕೊಳ್ಳಿ”. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತ ಪ್ರತಿ ವರ್ಷ ಜೀವಗಳನ್ನು ಉಳಿಸುವಲ್ಲಿ ಸ್ವಯಂಪ್ರೇರಿತ ರಕ್ತದಾನವು ವಹಿಸುವ ಪಾತ್ರಗಳ ಮೇಲೆ ಈ ಥೀಮ್ ಬೆಳಕು ಚೆಲ್ಲುತ್ತದೆ.
ಈ ಸಂದರ್ಭದಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರವು ರಕ್ತದಾನಿಗಳ ಪ್ರೇರಕರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು. ಉಡುಪಿ ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಶ್ರೀ ಶಂಕರ್ ನಾಯ್ಕ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನದ ಮಹತ್ವ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಕುರಿತು ಒತ್ತಿ ಹೇಳಿದರು. ವಿಜ್ಞಾನ ಎಷ್ಟೇ ಮುಂದುವರಿದಿದ್ದರು ರಕ್ತಕ್ಕೆ ರಕ್ತವೇ ಪರ್ಯಾಯ ಹೊರತು ಬೇರೆ ಯಾವುದೇ ಪರ್ಯಾಯವಿಲ್ಲ ಅಥವಾ ಕಾರ್ಖಾನೆಗಳಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ ಆದ್ದರಿಂದ ಸಾರ್ವಜನಿಕರು ರಕ್ತದಾನ ಮಾಡುವುದರ ಮೂಲಕ ಜೀವಗಳನ್ನು ಉಳಿಸುವ ಪ್ರಕ್ರೀಯೆಯಲ್ಲಿ ಭಾಗಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಅವಿನಾಶ ಶೆಟ್ಟಿ ಅವರು ಭಾರತದಲ್ಲಿ ರಕ್ತದ ಬೇಡಿಕೆ ಮತ್ತು ರಕ್ತದ ಪೂರೈಕೆಯಲ್ಲಿ ತುಂಬಾ ವ್ಯತ್ಯಾಸವಿದೆ. ಇದರಿಂದ ರೋಗಿಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ದೊರೆಯುತ್ತಿಲ್ಲ, ಇದಕ್ಕೆ ಹೆಚ್ಚು ಹೆಚ್ಚು ರಕ್ತ ದಾನ ಮಾಡುವುದೊಂದೆ ಪರಿಹಾರ ಎಂದರು.
ರಕ್ತದಾನದ ಕುರಿತು ಪೋಸ್ಟರ್ ರಚನಾ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಕೆ ಎಂ ಸಿ ಡೀನ್ ಡಾ ಪದ್ಮರಾಜ್ ಹೆಗ್ಡೆ ಬಹುಮಾನ ವಿತರಿಸಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದ ನಿರ್ದೇಶಕಿ ಡಾ ಶಮ್ಮಿ ಶಾಸ್ತ್ರಿಕಾರ್ಯಕ್ರಮದ ಅವಲೋಕನ ನೀಡಿದರು. ಶ್ರೀ ವಿಶ್ವೇಶ್ ಎನ್ ಸ್ವಾಗತಿಸಿದರು ಮತ್ತು ಶ್ರೀಮತಿ ಸುಚೇತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.