ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (whatsapp) ಹೊಸ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಚಾಟ್‌ಗಳು, ಕಾಲ್‌ಲಾಗ್ಸ್ ಮತ್ತು ಮೇನ್‌ಪೇಜ್ ಲುಕ್ ಅನ್ನು ಬದಲಾವಣೆ ಮಾಡಿದೆ. ಜೊತೆಗೆ ಹೊಸ ಅಪ್ಡೇಟ್‌ನಲ್ಲಿ ಹೊಸ ಫೀಚರ್ಸ್‌ಗಳನ್ನು ಕೂಡ ಸೇರ್ಪಡೆ ಮಾಡಿದೆ.
ಹೌದು, ವಾಟ್ಸಾಪ್ ಹೊಸ ಅಪ್ಡೇಟ್ ಪರಿಚಯಿಸಿದ್ದು, ತನ್ನ ಲುಕ್ ಅನ್ನು ರಿಫ್ರೆಶ್ ಮಾಡಿದೆ. ಈ ಅಪ್ಡೇಟ್ ಸದ್ಯದಲ್ಲೇ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೂ ಕೂಡ ಲಭ್ಯವಾಗಲಿದೆ. ಹಾಗಾದ್ರೆ ವಾಟ್ಸಾಪ್ ಹೊಸ ಅಪ್ಡೇಟ್‌ನಿಂದಾಗಿ ಏನೆಲ್ಲಾ ಬದಲಾವಣೆಯಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ
ವಾಟ್ಸಾಪ್‌ನಲ್ಲಿ ಹೊಸ ಲೇಔಟ್
ವಾಟ್ಸಾಪ್ ತನ್ನ ಲೇಔಟ್‌ನಲ್ಲಿ ಹೊಸ ವಿನ್ಯಾಸವನ್ನು ಪರಿಚಯಿಸಿದೆ, ಅಂದರೆ ವಾಟ್ಸಾಪ್ ವಿಂಡೋಧ ವಿನ್ಯಾಸವನ್ನು ರಿಫ್ರೆಶ್ ಮಾಡಿದೆ. ಇದರಿಂದಾಗಿ ನೀವು ವಾಟ್ಸಾಪ್ ಪೇಜ್‌ನ ಕೆಳಭಾಗದಲ್ಲಿ ನೀವು ಚಾಟ್‌ಗಳು, ಕರೆಗಳು, ಕಮ್ಯೂನಿಟಿಸ್ ಮತ್ತು ಸ್ಟೇಟಸ್ ಟ್ಯಾಬ್‌ಗಳನ್ನು ಕಾಣಬಹುದಾಗಿದೆ. ಇದರಿಂದ ನಿಮ್ಮ ಫೋನ್ ಬೃಹತ್ ಸ್ಕ್ರೀನ್ ಹೊಂದಿದ್ದರೆ ವಾಟ್ಸಾಪ್‌ನಲ್ಲಿ ಯಾವುದೇ ಟ್ಯಾಬ್ ಅನ್ನು ತ್ವರಿತವಾಗಿ ಪ್ರವೇಶಿಸಲು ಸಾಧ್ಯವಾಗಲಿದೆ. ಸದ್ಯ ಈ ಹೊಸ ಲೇಔಟ್ ಆಂಡ್ರಾಯ್ಡ್‌ನ ಕೆಲ ಬೀಟಾ ಬಳಕೆದಾರರಿಗೆ ಲಭ್ಯವಿದೆ ಎನ್ನಲಾಗಿದೆ.
ಪ್ರಸ್ತುತ ನೀವು ನಾವೆಲ್ಲಾ ಬಳಸುತ್ತಿರುವ ವಾಟ್ಸಾಪ್ ಆವೃತ್ತಿಯು ವಿಭಿನ್ನ ಕ್ರಮದಲ್ಲಿ ಟ್ಯಾಬ್‌ಗಳನ್ನು ಹೊಂದಿದೆ. ಅಂದರೆ ಮೊದಲಿಗೆ ಕಮ್ಯೂನಿಟಿಸ್, ನಂತರ ಚಾಟ್ಸ್, ಸ್ಟೇಟಸ್, ಕಾಲ್ ಟ್ಯಾಬ್‌ಗಳನ್ನು ಪಡೆದಿದೆ. ಆದರೆ ಹೊಸ ಆವೃತ್ತಿಯಲ್ಲಿ ಚಾಟ್‌ಗಳು, ಕರೆಗಳು, ಕಮ್ಯೂನಿಟಿಸ್,ಸ್ಟೇಟಸ್ ಅನ್ನು ಕಾಣಬಹುದಾಗಿದೆ.
ಚಾಟ್ ಲಾಕ್
ವಾಟ್ಸಾಪ್ ಹೊಸ ಅಪ್ಡೇಟ್‌ನಲ್ಲಿ ಚಾಟ್‌ಲಾಕ್ ಫೀಚರ್ಸ್‌ನಲ್ಲಿ ಸುಧಾರಣೆಯನ್ನು ಮಾಡಿದೆ. ಇದರಿಂದ ಜನರು ತಮ್ಮ ಸೂಪರ್ ಪರ್ಸನಲ್ ಚಾಟ್‌ಗಳಲ್ಲಿ ಫಿಂಗರ್‌ಪ್ರಿಂಟ್ ಲಾಕ್ ಅನ್ನು ಮಾಡಲು ಸಾದ್ಯವಾಗಲಿದೆ. ಇನ್ನು ನೀವು ಲಾಕ್ ಮಾಡಿದ ಚಾಟ್‌ಗಳು ಅಪ್ಲಿಕೇಶನ್‌ನ ಮೇನ್‌ಪೇಜ್‌ನಲ್ಲಿ ಹೈಡ್ ಆಗಿರಲಿವೆ, ಇದಕ್ಕಾಗಿ ನೀವು ಒಬ್ಬ ವ್ಯಕ್ತಿಯ ಪ್ರೊಫೈಲ್‌ಗೆ ಹೋಗಿ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್‌ಗಾಗಿ ಅದನ್ನು ಸಕ್ರಿಯಗೊಳಿಸಲು ಚಾಟ್ ಲಾಕ್ ಫೀಚರ್ಸ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
WearOS ಬೆಂಬಲ
ವಾಟ್ಸಾಪ್ ಹೊಸ ಅಪ್ಡೇಟ್ ಮೂಲಕ WearOS ಸ್ಮಾರ್ಟ್‌ವಾಚ್‌ಗಳಲ್ಲಿ ವಾಟ್ಸಾಪ್ ಬೆಂಬಲವನ್ನು ನೀಡಿದೆ. ಅಂದರೆ ಫಾಸಿಲ್ ಜೆನ್ 6, ಗ್ಯಾಲಕ್ಸಿ ವಾಚ್ 5 ಪ್ರೊ ಮತ್ತು ಇತರ ವೇರ್ ಓಎಸ್ ವಾಚ್‌ಗಳನ್ನು ಬಳಸುತ್ತಿರುವ ಬಳಕೆದಾರರು ಕೂಡ ಇನ್ಮುಂದೆ ವಾಟ್ಸಾಪ್ ಅನ್ನು ಬಳಸಬಹುದಾಗಿದೆ.
ಸ್ಟೇಟಸ್‌ನಲ್ಲಿ ಹೊಸ ಟೂಲ್ಸ್
ವಾಟ್ಸಾಪ್ ಸ್ಟೇಟಸ್‌ಗಾಗಿ ಹೊಸ ಟೂಲ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಅಪ್ಡೇಟ್ ಫಾಂಟ್ಸ್ ಮತ್ತು ಬ್ಯಾಕ್‌ಗ್ರೌಂಡ್ ಕಲರ್ಸ್, ಹೊಸ ಪಠ್ಯ ಓವರ್‌ಲೇ ಟೂಲ್ಸ್‌ಗಳನ್ನು ಸೇರ್ಪಡೆ ಮಾಡಿದೆ.
GIF ನಲ್ಲಿ ಬದಲಾವಣೆ
ಇನ್ನು ವಾಟ್ಸಾಪ್‌ನಲ್ಲಿ GIF ಗಳನ್ನು ಟ್ಯಾಪ್ ಮಾಡುವ ಅಗತ್ಯವಿಲ್ಲ. ಏಕೆಂದರೆ ನೀವು ವಾಟ್ಸಾಪ್ ಚಾಟ್‌ಗಳಲ್ಲಿ GIF ರಿಸೀವ್ ಮಾಡಿದರೆ ಅವು ಸ್ವಯಂಚಾಲಿತವಾಗಿ ಪ್ಲೇ ಆಗುತ್ತವೆ.
ಇನ್ನು ವಾಟ್ಸಾಪ್‌ನ ಅಪ್‌ಡೇಟ್‌ಗಳನ್ನು ಟ್ರ್ಯಾಕ್ ಮಾಡುವ WABetaInfo ವೆಬ್‌ಸೈಟ್, ವಾಟ್ಸಾಪ್ ಹೊಸ ಫೀಚರ್ಸ್‌ಗಳನ್ನು ಹೊರತರುತ್ತಿದೆ ಎಂದು ಬಹಿರಂಗಪಡಿಸಿದೆ. ಅದು ಬಳಕೆದಾರರಿಗೆ ವೀಡಿಯೊ ಕರೆ ಸಮಯದಲ್ಲಿ ತಮ್ಮ ಸ್ಕ್ರೀನ್ ಅನ್ನು ಸುಲಭವಾಗಿ ಶೇರ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದುಬಂದಿದೆ.
ಅಂದಹಾಗೆ ವಾಟ್ಸಾಪ್ ಪರಿಚಯಿಸಲಿರುವ ಈ ಆಯ್ಕೆಯು ಆಂಡ್ರಾಯ್ಡ್ ಆವೃತ್ತಿ ಸಂಖ್ಯೆ 2.23.11.19 ಗಾಗಿ ವಾಟ್ಸಾಪ್ ಬೀಟಾದೊಂದಿಗೆ ಬರುತ್ತದೆ. ಹೀಗಾಗಿ ಪ್ರಸ್ತುತ ಆಂಡ್ರಾಯ್ಡ್ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ವಿಡಿಯೋ ಕರೆ ಮಾಡಿದಾಗ ಬಳಕೆದಾರರು ವಾಟ್ಸಾಪ್ ಸ್ಕ್ರೀನ್ ಅನ್ನು ಶೇರ್ ಮಾಡಬಹುದಾದ ಆಯ್ಕೆ ಕಾಣಿಸಿಕೊಳ್ಳಲಿದೆ
source: gizbot.com.