ಬೆಂಗಳೂರು: ಗೃಹ ಜ್ಯೋತಿ ಯೋಜನೆ ಜಾರಿಗೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದ್ದು, ಒಟ್ಟು ಅಂದಾಜು ಸರಾಸರಿ 13 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಬುಧವಾರ ಬೆಸ್ಕಾಂ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದ್ದು, ಗೃಹ ಬಳಕೆದಾರರ ಸರಾಸರಿ ಒಂದು ವರ್ಷದ ವಿದ್ಯುತ್ ಬಳಕೆಯ ಪ್ರಮಾಣವನ್ನು ಪಡೆದುಕೊಂಡ ಬಳಿಕ ಉಚಿತವಾಗಿ ವಿದ್ಯುತ್ ಪ್ರಮಾಣವನ್ನು ನಿಗದಿಪಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 2.16 ಕೋಟಿ ಗ್ರಾಹಕರಿದ್ದು, ಈ ಪೈಕಿ 200 ಯೂನಿಟ್ ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರು 2.14 ಕೋಟಿ ಇದ್ದಾರೆ. ಇವರ ವಾರ್ಷಿಕ ಬಳಕೆ 13,575 ಮಿಲಿಯನ್ ಯುನಿಟ್ ಗಳು. ಈ ಗ್ರಾಹಕರು ಪ್ರತಿ ತಿಂಗಳು ಸರಾಸರಿ 53 ಯೂನಿಟ್ ವಿದ್ಯುತ್ ಬಳಕೆ ಮಾಡುತ್ತಾರೆ. 2 ಲಕ್ಷ ಜನರು 200 ಯೂನಿಟ್ ಹೆಚ್ಚು ಬಳಕೆ ಮಾಡುತ್ತಾರೆ ಎಂದರು.
ಸೇವಾ ಸಿಂಧು ಪೋರ್ಟ್‌ಲ್ ನಲ್ಲಿ ಜೂನ್ 15 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಮೂಲಕ ಯೋಜನೆಯನ್ನು ಜಾರಿಗೊಳಿಸುತ್ತೇವೆ. ಗ್ರಾಹಕರು ಸರಾಸರಿ ಬಿಲ್ ಗಿಂತ ಹೆಚ್ಚು ಉಪಯೋಗ ಮಾಡಿದರೆ ಹೆಚ್ಚುವರಿ ಬಳಕೆಗೆ ಬಿಲ್ ಕಟ್ಟಬೇಕಿದೆ. ಆದರೆ ಉಚಿತ ಯೋಜನೆ ಅಡಿಯಲ್ಲಿ ಗ್ರಾಹಕರು ನಿಗದಿತ ಶುಲ್ಕವನ್ನು ಕಟ್ಟುವ ಹಾಗಿಲ್ಲ. ಸರಾಸರಿ ಬಳಕೆಗಿಂತ ಹೆಚ್ಚುವರಿ ಬಳಕೆ ಮಾಡಿದರೆ ಅಂತಹ ಗ್ರಾಹಕರು ನಿಗದಿತ ಶುಲ್ಕ ಕಟ್ಟಬೇಕಾಗಿಲ್ಲ. ಹೆಚ್ಚುವರಿ ಬಳಕೆಗೆ ಮಾತ್ರ ಇಂಧನ ಶುಲ್ಕವನ್ನು ಕಟ್ಟಬೇಕಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?
ಸೇವಾಸಿಂಧು ಪೋರ್ಟಲ್ ನಲ್ಲಿ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ಕಂಪ್ಯೂಟರ್, ಮೊಬೈಲ್ ನಿಂದ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗುವುದು ಹಾಗೂ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್ ಗಳಲ್ಲೂ ಅವಕಾಶ ಕಲ್ಪಿಸಲಾಗುತ್ತಿದ್ದು ಜೂನ್ 15 ರಿಂದ ಅರ್ಜಿ ಪ್ರಾರಂಭ ಮಾಡುತ್ತೇವೆ. ಗ್ರಾಹಕರ ದೃಷ್ಟಿಯಿಂದ ಸರ್ವರ್ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಎಲ್ಲಾ ಸಿದ್ಧತೆಗಳನ್ನು E-Governance ಇಲಾಖೆ ಮಾಡಿಕೊಂಡಿರುತ್ತದೆ.