ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ತ್ರಿವಳಿ ರೈಲು ಅಪಘಾತದ ಮೂಲ ಕಾರಣವನ್ನು ರೈಲ್ವೆ ಇಲಾಖೆ ಪತ್ತೆ ಮಾಡಿದೆ.
ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಹಾಗೂ ಗೂಡ್ಸ್ ರೈಲು ಅಪಘಾತ ಶುಕ್ರವಾರ ಸಂಜೆ ಸಂಭವಿಸಿತ್ತು.
ಇದರಲ್ಲಿ 288 ಜನ ಮೃತಪಟ್ಟು, 1100 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಅಪಘಾತಕ್ಕೂ ಪೂರ್ವದಲ್ಲಿ ಈ ಮಾರ್ಗದಲ್ಲಿ ರೈಲಿನ ಇರುವಿಕೆ ಹಾಗೂ ಅದರ ನಿರ್ದಿಷ್ಟ ಸ್ಥಳದ ಮಾಹಿತಿ ನೀಡುವ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯಲ್ಲಿ ಕೈಗೊಂಡ ಒಂದಷ್ಟು ಬದಲಾವಣೆಗಳು ಅಪಘಾತಕ್ಕೆ ಕಾರಣ. ಆದರೆ ಅಪಘಾತಕ್ಕೂ ಘರ್ಷಣೆ ನಿರೋಧಕ ವ್ಯವಸ್ಥೆ (ಕವಚ) ಗೂ ಯಾವುದೇ ಸಂಬಂಧವಿಲ್ಲ ಎಂದು ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಸ್ಪಷ್ಟಪಡಿಸಿದ್ದಾರೆ.
‘ಸದ್ಯ ಹಾನಿಗೀಡಾದ ಹಳಿಗಳ ಮರುಜೋಡಣೆ ಕಾರ್ಯ ಪ್ರಗತಿಯಲ್ಲಿದೆ. ಬುಧವಾರ ಹೊತ್ತಿಗೆ ರೈಲು ಸಂಚಾರ ಈ ಮಾರ್ಗದಲ್ಲಿ ಮರು ಆರಂಭವಾಗಲಿದೆ. ತನಿಖೆ ಪೂರ್ಣಗೊಂಡಿದೆ. ಅಪಘಾತಕ್ಕೆ ಮುಖ್ಯ ಕಾರಣವನ್ನು ಪತ್ತೆ ಮಾಡಲಾಗಿದೆ. ಆದರೆ ಅದರ ಸಂಪೂರ್ಣ ವಿವರವನ್ನು ಈ ಸದ್ಯಕ್ಕೆ ನೀಡುವುದಿಲ್ಲ. ಸಾಧನಗಳಲ್ಲಿನ ಬದಲಾವಣೆ ಏಕೆ ಮಾಡಲಾಗಿದೆ ಎಂಬುದು ತನಿಖೆಯ ವರದಿಯಲ್ಲಿ ಉಲ್ಲೇಖಿಸಲಾಗುವುದು. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕವಚ’ ಮೇಲಿನ ಆರೋಪ ನಿರಾಧಾರ’ ಎಂದಿದ್ದಾರೆ
‘ಅಪಘಾತ ಸಂತ್ರಸ್ತರಲ್ಲಿ ಸುಮಾರು 300 ಜನರ ಕುಟುಂಬದವರಿಗೆ ಪರಿಹಾರ ಹಣ ನೀಡಲಾಗಿದೆ. ಗಾಯಾಳುಗಳು ದಾಖಲಾಗಿರುವ ಸೊರೊ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಲಾಗಿದೆ. ಹೈದರಾಬಾದ್, ಚೆನ್ನೈ, ಬೆಂಗಳೂರು, ರಾಂಚಿ ಹಾಗೂ ಕೊಲ್ಕತ್ತಕ್ಕೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆ ಪಡೆದ ಪ್ರಯಾಣಿಕರು ಈ ರೈಲುಗಳ ಮೂಲಕ ಅವರ ಊರುಗಳಿಗೆ ತಲುಪಿಸಲಾಗುವುದು’ ಎಂದು ವೈಷ್ಣವ ತಿಳಿಸಿದ್ದಾರೆ.
ವರದಿಯಲ್ಲಿ ಏನಿದೆ?: ಮುಖ್ಯ ಲೇನ್‌ನಲ್ಲಿ ಕೋರಮಂಡಲ ಎಕ್ಸ್‌ಪ್ರೆಸ್ (12841)ಗೆ ಸಿಗ್ನಲ್ ನೀಡಿ ನಂತರ ಹಿಂಪಡೆಯಲಾಯಿತು. ಈ ರೈಲು ಲೂಪ್ ಲೇನ್‌ಗೆ ಪ್ರವಶಿಸಿತು. ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೆಲ ಬೋಗಿಗಳು ಪಕ್ಕದ ಟ್ರ್ಯಾಕ್‌ಗೆ ಬಿದ್ದಿವೆ. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (12864) ರೈಲು ಮುಖ್ಯ ಲೇನ್‌ನಲ್ಲೇ ಅತ್ತಕಡೆಯಿಂದ ಬಂದಿದೆ. ಹಳಿ ಮೇಲೆ ಬಿದ್ದಿದ್ದ ಬೊಗಿಗಳಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.