ಬೆಂಗಳೂರು : ಮಂಗಳೂರಿನ ಸೋಮೇಶ್ವರ್ ಬೀಚ್ ನಲ್ಲಿ ನಿನ್ನೆ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರುಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿಗೆ ವಿರುದ್ಧವಾದ ಯಾವುದೇ ವಿಷಯವಿರಲಿ, ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳುತ್ತದೆ. ಕ್ರಮ ತೆಗೆದುಕೊಳ್ಳಲು ಪೊಲೀಸರು ಇದ್ದಾರೆ ಕಾನೂನಿಗೆ ವಿರುದ್ಧವಾಗಿ ಏನಾದರೂ ಇದ್ದರೆ ನಾವು ಖಂಡಿತವಾಗಿಯೂ ಕ್ರಮ ಕೈಗೊಳ್ಳುತ್ತೇವೆ ಎಂದರು.
ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಕೇರಳ ಮೂಲದ ಆರು ಮಂದಿ ವಿದ್ಯಾರ್ಥಿಗಳು ವಿಹಾರಕ್ಕೆಂದು ಬಂದಿದ್ದ ವೇಳೆ ಮೂವರು ವಿದ್ಯಾರ್ಥಿಗಳು ಅನ್ಯಕೋಮಿಗೆ ಸೇರಿದ್ದಾರೆ ಎಂದು ಗಮನಿಸಿ, ತಂಡವೊಂದು ಇವರನ್ನು ಹಿಂಬಾಲಿಸಿದೆ. ಬಳಿಕ ಸೋಮೇಶ್ವರ ಬೀಚ್ ನಲ್ಲಿ ವಿಹಾರ ನಡೆಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದೆ.
ದಾಳಿಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಮೂವರು ವಿದ್ಯಾರ್ಥಿನಿಯರು ಊರಿಗೆ ವಾಪಸ್ ತೆರಳಿದ್ದಾರೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಉಳ್ಳಾಲ ಪೊಲೀಸರು ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಿದ್ದು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.