ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ನಗರದ ನಂತೂರು ಮತ್ತು ಕೆಪಿಟಿ ಜಂಕ್ಷನ್‌ನಲ್ಲಿ ಫ್ಲೈ ಓವರ್ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ವೇಗ ನೀಡುವಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಹಾಗೂ ಆರಂಭಿಕ ಹಂತದಲ್ಲಿರುವ ಯೋಜನೆಗಳಿಗೆ ಸಂಬಂಧಿಸಿ ಚರ್ಚೆ ನಡೆಸಿದರು.
ಎರಡೂ ಜಂಕ್ಷನ್‌ಗಳಲ್ಲಿ ಉಂಟಾಗುತ್ತಿರುವ ದಟ್ಟಣೆಯಿಂದ ವಾಹನ ಸವಾರರು ಪರಿತಪಿಸುತ್ತಿದ್ದು, ಫ್ಲೈ ಓವರ್ ನಿರ್ಮಾಣಕ್ಕೆ ಸಂಬಂಧಿಸಿದ ಬೇಡಿಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಯೋಜನಗೆ ಸಂಬಂಧಿಸಿದ ಭೂಮಿ ಒತ್ತುವರಿ, ಮರಗಳ ತೆರವು, ವಿದ್ಯುತ್ ಲೈನಗಳ ಸ್ಥಳಾಂತರ, ನಂತೂರಿನಲ್ಲಿ ಭೂ ಸ್ವಾಧೀನ ವಿಚಾರವಾಗಿ ನ್ಯಾಯಾಲಯದಲ್ಲಿರುವ ಪ್ರಕರಣದ ಶೀಘ್ರ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವಂತೆ ನಳಿನ್ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಮುಖ್ಯಸ್ಥ ವಿವೇಕ್ ಜೈಸ್ವಾಲ್, ಅಪರ ಜಿಲ್ಲಾಧಿಕಾರಿ ಎಚ್. ಕೃಷ್ಣಮೂರ್ತಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಲಿಂಗೇಗೌಡ, ದಕ್ಷಿಣ ಕನ್ನಡ ಡಿಎಫ್‌ಒ ಡಾ| ದಿನೇಶ್ ಕುಮಾರ್ ವೈ.ಕೆ., ಮೆಸ್ಕಾಂ ಕಾಯನಿರ್ವಾಹಕ ಎಂಜಿನಿಯರ್ ಲೋಹಿತ್, ವಿಶೇಷ ಭೂ ಸ್ವಾಧೀನಾಧಿಕಾರಿ ಬಿನೋಯ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.