ಡೆಹರಾಡೂನ್, ಮೇ. 24: ಉತ್ತರಾಖಂಡದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಡೆಹ್ರಾಡೂನ್ ಮತ್ತು ನವದೆಹಲಿ ನಡುವೆ ಈ ರೈಲು ಓಡಲಿದೆ ಎಂದು ಮೊರಾದಾಬಾದ್ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ (ಡಿಸಿಎಂ) ಸುಧೀರ್ ಸಿಂಗ್ ಹೇಳಿದ್ದಾರೆ.
ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಉದ್ಘಾಟನಾ ಸಮಾರಂಭದಲ್ಲಿ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್ ರೈಲು ನಿಲ್ದಾಣದಲ್ಲಿ ಉಪಸ್ಥಿತರಿರುತ್ತಾರೆ ಎಂದು ಸುಧೀರ್ ಸಿಂಗ್ ಹೇಳಿದ್ದಾರೆ. ಇದಕ್ಕೂ ಮುನ್ನ ಮೇ 18 ರಂದು ಪ್ರಧಾನಿ ಮೋದಿ ಅವರು ಪುರಿ ಮತ್ತು ಹೌರಾ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದ್ದರು.
ಇತ್ತೀಚೆಗೆ ಒಡಿಶಾದ ಮೊದಲ ವಂದೇ ಭಾರತ್ ರೈಲು ಪ್ರಾರಂಭವಾದ ನಂತರ, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಮಾತನಾಡಿ, ಈ ವರ್ಷದ ಜೂನ್ ವೇಳೆಗೆ ವಂದೇ ಭಾರತ್ ಬಹುತೇಕ ಎಲ್ಲಾ ರಾಜ್ಯಗಳನ್ನು ತಲುಪಬೇಕು ಎಂದು ಪ್ರಧಾನಿ ಮೋದಿ ಗುರಿ ಹೊಂದಿದ್ದಾರೆ ಎಂದು ಹೇಳಿದ್ದರು. ಈ ಆಧುನಿಕ ಅರೆ ವೇಗದ ರೈಲು ಅತ್ಯಾಧುನಿಕ ಪ್ರಯಾಣಿಕ ಸೌಕರ್ಯಗಳನ್ನು ಹೊಂದಿದೆ.
ಹೊವಾರ್ಹ್‌ನಲ್ಲಿ ಎಎನ್‌ಐ ಜೊತೆ ಮಾತನಾಡಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, “ಜೂನ್ ವೇಳೆಗೆ ವಂದೇ ಭಾರತ್ ಬಹುತೇಕ ಎಲ್ಲಾ ರಾಜ್ಯಗಳನ್ನು ತಲುಪಬೇಕು ಎಂದು ಪ್ರಧಾನಿ ಮೋದಿ ಗುರಿಯನ್ನು ಹೊಂದಿದ್ದಾರೆ. ವಂದೇ ಮೆಟ್ರೋವನ್ನು 100 ಕಿ.ಮೀ ಗಿಂತ ಕಡಿಮೆ ದೂರಕ್ಕೆ ಮತ್ತು ಪ್ರಯಾಣಿಕರ ದೈನಂದಿನ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದರು.
ಪುರಿ ನಿಲ್ದಾಣದಲ್ಲಿ ಒಡಿಶಾದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ವಂದೇ ಸ್ಲೀಪರ್ ಮತ್ತು ವಂದೇ ಮೆಟ್ರೋ ರೈಲುಗಳು ಈಗಾಗಲೇ ಅಭಿವೃದ್ಧಿ ಹಂತದಲ್ಲಿದ್ದು, ಮುಂದಿನ ವರ್ಷದ ಜನವರಿ – ಫೆಬ್ರವರಿ ವೇಳೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಸ್ಥಳೀಯವಾಗಿ ತಯಾರಿಸಿದ, ಅರೆ ವೇಗದ, ಸ್ವಯಂ ಚಾಲಿತ ರೈಲು ಸೆಟ್ ಆಗಿದೆ. ರೈಲು ಅತ್ಯಾಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಪ್ರಯಾಣಿಕರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ಒದಗಿಸುತ್ತದೆ.