ನವದೆಹಲಿ: ಜೂನ್ 1 ರಿಂದ ಎಲೆಕ್ಟ್ರಿಕ್ ವಾಹನಗಳು ದುಬಾರಿಯಾಗಲಿವೆ.ವಿದ್ಯುತ್ ಚಾಲಿತ ವಾಹನಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇಕಡ 40ರಷ್ಟು ಸಬ್ಸಿಡಿಯನ್ನು ಶೇಕಡ 15ಕ್ಕೆ ಇಳಿಕೆ ಮಾಡಿದೆ.
ಹಸಿರು ಇಂಧನಕ್ಕೆ ಉತ್ತೇಜನ ನೀಡಲು ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ಫೇಮ್ ಇಂಡಿಯಾ ಯೋಜನೆ ಅಡಿ 10,000 ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದೆ. ಎರಡನೇ ಹಂತದಲ್ಲಿ ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳಿಗೆ 3500 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಮೂಲಕ ಇವಿಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ.
ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗಿ ಸಬ್ಸಿಡಿಗೆ ಹೆಚ್ಚಿನ ಮೊತ್ತ ಖರ್ಚಾಗುತ್ತಿದೆ. ಇದಕ್ಕಾಗಿ ಮೀಸಲಿಟ್ಟ ನಿಧಿ ಕಡಿಮೆಯಾಗುತ್ತಿದ್ದು, ಸಬ್ಸಿಡಿ ಪ್ರಮಾಣ ಕಡಿಮೆ ಮಾಡಲು ಮತ್ತು ತ್ರಿಚಕ್ರ ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗೆ ಕಾಯ್ದಿಸಿರುವ ಒಂದು ಸಾವಿರ ಕೋಟಿ ರೂಪಾಯಿಯಲ್ಲಿ ಬಳಕೆಯಾಗದ ಹಣವನ್ನು ದ್ವಿಚಕ್ರ ಎಲೆಕ್ಟ್ರಿಕ್ ವಾಹನಗಳಿಗೆ ವರ್ಗಾವಣೆ ಮಾಡಲು ಬೃಹತ್ ಕೈಗಾರಿಕಾ ಸಚಿವಾಲಯದಿಂದ ಉನ್ನತ ಮಟ್ಟದ ಅಂತರ ಸಚಿವಾಲಯ ಸಮಿತಿಗೆ ಶಿಫಾರಸು ಮಾಡಿದೆ. ಹೀಗೆ ಸಬ್ಸಿಡಿ ಕಡಿಮೆ ಮಾಡುವುದರಿಂದ ಹೆಚ್ಚಿನ ಗ್ರಾಹಕರಿಗೆ ಲಾಭ ದೊರೆಯುವಂತೆ ಮಾಡಬಹುದು. ಇಲ್ಲದಿದ್ದಲ್ಲಿ ಒಂದೆರಡು ತಿಂಗಳಲ್ಲಿ ಸಬ್ಸಿಡಿ ಮೊತ್ತ ಬರಿದಾಗುತ್ತದೆ. ಹೀಗಾಗಿ ಸಬ್ಸಿಡಿ ಕಡಿತ ಮಾಡಲಾಗಿದೆ ಎಂದು ಹೇಳಲಾಗಿದೆ.