ಬೆಂಗಳೂರು, ಮೇ 23: ವಿಧಾನಸಭಾ ಸ್ಪೀಕರ್ ಹುದ್ದೆಗೆ ಕಾಂಗ್ರೆಸ್ ನ ಹಿರಿಯ ನಾಯಕ ಮತ್ತು ಅಲ್ಪಸಂಖ್ಯಾತ ಸಮುದಾಯದ ಯು.ಟಿ. ಖಾದರ್ ನಾಮಪತ್ರ ಸಲ್ಲಿಸಿದರು. ವಿಧಾನಸಭೆಯ 23ನೇ ಸ್ಪೀಕರ್ ಆಗಿ ಖಾದರ್ ಅಧಿಕಾರ ಸ್ವೀಕರಿಸಲಿದ್ದಾರೆ. ಖಾದರ್ ಅವರು ಮಂಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಮಂಗಳವಾರ ವಿಧಾನಸಭೆ ಕಾರ್ಯದರ್ಶಿ ಅವರ ಕೊಠಡಿಗೆ ತೆರಳಿ ಯು.ಟಿ. ಖಾದರ್ ನಾಮಪತ್ರ ಸಲ್ಲಿಸುವ ವೇಳೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮಗಳ ಜೊತೆಗೆ ಖಾದರ್ ಮಾತನಾಡಿ, ‘ಸಂವಿಧಾನ ಬದ್ಧವಾದ ಹುದ್ದೆಯನ್ನು ಪಕ್ಷದ ಹೈಕಮಾಂಡ್ ನೀಡಿದೆ. ಅತ್ಯಂತ ಸಂತೋಷದಿಂದ ಈ ಹುದ್ದೆಯನ್ನು ನಾನು ಒಪ್ಪಿದ್ದೇನೆ” ಎಂದು ಹೇಳಿದರು.
“ಗೌರವಯುತವಾದ ಸ್ಥಾನಕ್ಕೆ ಗೌರವ ತಂದು ಕೊಡುತ್ತೇನೆ, ಸಚಿವ ಸ್ಥಾನ ಯಾರಿಗೂ ಬೇಕಾದರೂ ಸಿಗಬಹುದು. ಆದರೆ ಸಭಾಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ. ಆಡಳಿತ ಹಾಗೂ ಪ್ರತಿಪಕ್ಷದ ಸಹಕಾರ ಪಡೆದುಕೊಂಡು ಪ್ರೀತಿಯಿಂದ, ಪಾರದರ್ಶಕವಾಗಿ ಸಭೆಯನ್ನು ನಡೆಸಿಕೊಂಡು ಹೋಗುತ್ತೇನೆ” ಎಂದು ಖಾದರ್ ಈ ಸಂದರ್ಭದಲ್ಲಿ ಹೇಳಿದರು.