ಹೈದರಾಬಾದ್ : ಕನ್ನಡದ ಅಮೃತವರ್ಷಿಣಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಬಹುಭಾಷಾ ನಟ ಶರತ್ ಬಾಬು (71) ಇಂದು ಹೈದರಾಬಾದ್ನ ಎಐಜಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಶರತ್ ಬಾಬು ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.ಏಪ್ರಿಲ್ನ ಮೊದಲ ವಾರದಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಚೇತರಿಸಿಕೊಂಡ ಬಳಿಕ ಅವರನ್ನು ಹೈದರಾಬಾದ್ಗೆ ಕರೆದೊಯ್ಯಲಾಗಿತ್ತು. ಅದಾದ ಬಳಿಕ ಅಲ್ಲಿ ಮತ್ತೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು.
ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ನಟ ಶರತ್ ಬಾಬು ಅವರಿಗೆ ಹೈದರಾಬಾದ್ನ ಎಐಜಿ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿಂದ ಚಿಕಿತ್ಸೆ ನೀಡಲಾಗ್ತಿತ್ತು. ಶರತ್ ಬಾಬು ಅವರು ಕಿಡ್ನಿ, ಲಂಗ್ಸ್, ಲಿವರ್ ಮತ್ತಿತರ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ವೆಂಟಿಲೇಟರ್ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದೆರಡು ದಿನಗಳಿಂದ ಶರತ್ ಬಾಬು ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಶರತ್ ಬಾಬು ತೆಲುಗು, ತಮಿಳು, ಕನ್ನಡ ಚಿತ್ರರಂಗದಲ್ಲಿ ಬಹು ಜನಪ್ರಿಯ ನಟರಾಗಿದ್ದವರು. ಸಿನಿಮಾ ನಾಯಕನಾಗಿ, ಎರಡನೇ ನಾಯಕನಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ 40 ವರ್ಷದ ಸಿನಿ ಬದುಕಿನಲ್ಲಿ ಸುಮಾರು 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶರತ್ ಬಾಬು ನಟಿಸಿದ್ದಾರೆ.