ನವದೆಹಲಿ: ಇಂದಿನಿಂದ ದೇಶಾದ್ಯಂತ 2000 ರೂ. ನೋಟು ಬದಲಾವಣೆಗೆ ಆರ್‌ಬಿಐ ಅವಕಾಶ ಕಲ್ಪಿಸಿದೆ. ಚಲಾವಣೆಯಿಂದ ಹಿಂದಕ್ಕೆ ಪಡೆಯಲು ನಿರ್ಧರಿಸಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಇಂದಿನಿಂದ ನಾಲ್ಕು ತಿಂಗಳ ಕಾಲ ಬ್ಯಾಂಕುಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.ತಮ್ಮ ಖಾತೆಗೆ ಜಮಾ ಕೂಡ ಮಾಡಬಹುದು.
ಇದಕ್ಕಾಗಿ ಯಾವುದೇ ಫಾರ್ಮ್, ಭರ್ತಿ ಮಾಡಬೇಕಿಲ್ಲ, ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಿಲ್ಲ. ಒಮ್ಮೆ ಗ್ರಾಹಕ ಸರತಿ ಸಾಲಿನಲ್ಲಿ ನಿಂತಾಗ ಗರಿಷ್ಠ 20 ಸಾವಿರ ರೂಪಾಯಿವರೆಗೆ ಮಾತ್ರ ನೋಟು ವಿನಿಮಯ ಮಾಡಿಕೊಳ್ಳಬಹುದು. ಮತ್ತೆ ಸರತಿ ಸಾಲಿನಲ್ಲಿ ನಿಂತು ಉಳಿದ 2000 ರೂ. ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದ್ದು, ಒಬ್ಬ ವ್ಯಕ್ತಿ ಒಂದು ದಿನ ಎಷ್ಟು ಬಾರಿ ಬೇಕಾದರೂ ಸರತಿಯಲ್ಲಿ ನಿಂತು ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದೆ ಎಂದು ಆರ್.ಬಿ.ಐ. ಸ್ಪಷ್ಟನೆ ನೀಡಿದೆ.
ಸೆಪ್ಟಂಬರ್ 30ರವರೆಗೆ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಲ್ಲಿ ನೋಟು ಬದಲಾವಣೆ ಅಥವಾ ಜಮೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬೇರೆ ಬ್ಯಾಂಕಿಗೆ ಹೋಗಿ ಒಂದು ಸಲಕ್ಕೆ ಗರಿಷ್ಟ 20 ಸಾವಿರ ರೂಪಾಯಿ ಮೌಲ್ಯದ 2000 ರೂ. ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.