ಮಂಗಳೂರು, ಮೇ, 19: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಫೋಟೋ ಅಳವಡಿಸಿದ ಬ್ಯಾನರ್‌ಗೆ ಚಪ್ಪಲಿ ಹಾರ ಹಾಕಿದ ಕಾರ್ಯಕರ್ತರಿಗೆ ಪೊಲೀಸರು ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಆದ್ದರಿಂದ ಪೊಲೀಸರ ವಿರುದ್ಧ ಇಲಾಖೆ ಕೊನೆಗೂ ಶಿಸ್ತು ಕ್ರಮ ಕೈಗೊಂಡಿದೆ. ಪುತ್ತೂರು ಗ್ರಾಮಾಂತರ ಠಾಣೆ ಎಸ್‌ಐ ಶ್ರೀನಾಥ್ ರೆಡ್ಡಿ, ಪುತ್ತೂರು ನಗರ ಠಾಣೆ ಸಿಬ್ಬಂದಿ ಹರ್ಷಿತ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಅಲ್ಲದೆ ಇಂದು ಪುತ್ತೂರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭೇಟಿ ನೀಡಲಿದ್ದು, ಹಲ್ಲೆಗೊಳಗಾದ ಕಾರ್ಯಕರ್ತರನ್ನು ಮಾತನಾಡಿಸಲಿದ್ದಾರೆ. ಹಾಗೂ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪುತ್ತೂರು ಡಿವೈಎಸ್‌ಪಿ ವೀರಯ್ಯ ಹೀರೇಮಠ್ ವಿರುದ್ಧ ಇಲಾಖೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಇನ್ನು ದೌರ್ಜನ್ಯಕ್ಕೊಳಗಾದ ಅವಿನಾಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಕ್ರಮ ಜರುಗಿಸಲಾಗಿದ್ದು, ರಾಜ್ಯಾದ್ಯಂತ ಪೊಲೀಸರ ಈ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಾಟೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕ ಪ್ರದೇಶವನ್ನು ಕುರೂಪಗೊಳಿಸಿದ ಸೆಕ್ಷನ್‌ನಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ಪ್ರಕರಣ ಸಂಬಂಧ 9 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ವಶದಲ್ಲಿದ್ದವರ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎನ್ನುವ ಮಾಹಿತಿ ಹರಿದಾಡಿದೆ. ದೌರ್ಜನ್ಯಕ್ಕೊಳಗಾದ ವ್ಯಕ್ತಿಗಳು ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೆ ದೌರ್ಜನ್ಯಕ್ಕೊಳಗಾದ ಅವಿನಾಶ್ ನೀಡಿದ ದೂರಿನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪುತ್ತೂರು ಡಿವೈಎಸ್‌ಪಿ, ಪುತ್ತೂರು ಗ್ರಾಮಾಂತರ ಠಾಣೆ ಎಸ್‌ಐ ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ವಿಕ್ರಮ್ ಅಮಾಟೆ ತಿಳಿಸಿದರು.
ಇನ್ನು ಕಾರ್ಯಕರ್ತರ ಮೇಲಿನ ಪೊಲೀಸರ ಹಲ್ಲೆಗೆ ರಾಜ್ಯಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಇಂದು ಪುತ್ತೂರಿಗೆ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಲಿದ್ದಾರೆ. ಗಂಭೀರ ಗಾಯಕ್ಕೊಳಗಾಗಿ ಆಸ್ಪತ್ರೆಗೆ ಸೇರಿರುವ ಬಿಜೆಪಿ ಕಾರ್ಯಕರ್ತರುನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ. ಈಗಾಗಲೇ ಗಾಯಗೊಂಡ ಕಾರ್ಯಕರ್ತರಿಗೆ ಫೋನ್ ಮೂಲಕ ಯತ್ನಾಳ್ ಸಾಂತ್ವನ ಹೇಳಿದ್ದು, ಪೊಲೀಸರನ್ನು ಅಮಾನತು ಮಾಡದೇ ಹೋದರೆ ಹೋರಾಟದ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ ಎನ್ನಲಾಗಿದೆ.