ಬೆಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ 5 ಗ್ಯಾರಂಟಿಗಳ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಳೆ ಮಧ್ಯಾಹ್ನ 12.30 ಕ್ಕೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಸಂಪುಟ ಸಭೆ ನಡೆಯಲಿದ್ದು, ಬಳಿಕ 5 ಗ್ಯಾರಂಟಿಗಳ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
5 ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಲು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಕರೆಸಿ ಬೃಹತ್ ಸಮಾವೇಶ ಆಯೋಜಿಸುವ ಉದ್ದೇಶವೂ ಇದೆ ಎನ್ನಲಾಗಿದೆ. ಪ್ರತಿ ಮನೆಗೆ ಬಿಪಿಎಲ್ ಕಾರ್ಡಿಗೆ ಮಾಸಿಕ 10 ಕೆಜಿ ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್, ಮನೆಯ ಯಜಮಾನಿಗೆ 2,000 ರೂ. ಮಹಿಳೆಯರಿಗೆ ಉಚಿತ ಬಸ್ ಪಾಸ್, ನಿರುದ್ಯೋಗಿಗಳಿಗೆ 3,500 ರೂ. ವರೆಗೆ ಸಹಾಯಧನ ನೀಡುವ ಭರವಸೆಯನ್ನು ಕಾಂಗ್ರೆಸ್ ನೀಡಿದೆ.