ಉಡುಪಿ: ಬಂಧನದಲ್ಲಿಡುವ ಉದ್ದೇಶದಿಂದ ಅಪಹರಿಸಿ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಪಟ್ಟ ಆರೋಪಿಗಳಿಗೆ ಜಾಮೀನು ಮಂಜೂರುಗೊಂಡಿದೆ.
ಮೇ 3ರಂದು ಉಡುಪಿ ಪೋಕ್ಸೋ ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ನಿಟ್ಟೆಯ ಅಬ್ದುಲ್ ಜಬ್ಟಾರ್ ಬಂದಿದ್ದು, ಸಾಕ್ಷ್ಯ ನುಡಿದು ಆಟೋದಲ್ಲಿ ಹೋಗುತ್ತಿರುವಾಗ ಸಂಜೆ 4.30ರ ವೇಳೆಗೆ ಗುಂಡಿಬೈಲು ರಸಿಕ ಬಾರ್ ಬಳಿ ಆರೋಪಿಗಳಾದ ಫಾರೂಕ್ ನಿಟ್ಟೆ, ಶಾರೂಕ್, ಅನಿಲ್ ಪೂಜಾರಿ, ಇಕ್ಬಾಲ್ ಸಾಣೂರು ಅವರು ಆತನ ಬಟ್ಟೆಯನ್ನು ಕಳಚಿ ಹಲ್ಲೆ ಮಾಡಿದ್ದರು.
ಬಳಿಕ ಬಲತ್ಕಾರವಾಗಿ ಕಾರಿನೊಳಗೆ ದೂಡಿ ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಒಂದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ. ಅನಂತರ ಮೇ 4ರಂದು ಪಂಜಿಮಾರು ಬಳಿ ಪೊದೆಯೊಳಗೆ ದೂಡಿ ಹಾಕಿದ್ದಾರೆ ಎಂದು ಜಬ್ಟಾರ್ ಅವರು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನಿನ ಮೇಲೆ ಬಿಡುಗಡೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಪರ ವಿರೋಧ ವಾದವನ್ನು ಆಲಿಸಿದ ಉಡುಪಿಯ ಹಿರಿಯ ಸಿವಿಲ್ ಜಡ್ಜ್ ಮತ್ತು ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶರಾದ ಶಕುಂತಲಾ ಎಂ. ಅವರು ಆರೋಪಿಗಳಿಗೆ ಷರತ್ತುಬದ್ದ ಜಾಮೀನು ನೀಡಿ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ಉಡುಪಿ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿ ವಾದಿಸಿದ್ದರು.