ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಬಹುತೇಕ ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ತಗ್ಗಿದ್ದು, ಸದ್ಯ ಇರುವ ನೀರನ್ನು ನೋಡಿಕೊಂಡು ವಾರ್ಡ್ ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಎಲ್ಲ ಭಾಗಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ.ಬನ್ನಂಜೆ, ಮಣಿಪಾಲ, ಪರ್ಕಳ, ಹೆರ್ಗ, ಇಂದ್ರಾಳಿ, ಶಿರಿಬೀಡು, ಒಳಕಾಡು, ದೊಡ್ಡಣಗುಡ್ಡೆ ಭಾಗದ ಕೆಲವು ಭಾಗದಲ್ಲಿ ಮನೆಗಳಿಗೆ ಸರಿಯಾಗಿ ನೀರು ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದೆ. ಸದ್ಯಕ್ಕೆ ಎರಡು ದಿನಗಳ ಕಾಲ ಬಜೆ ಡ್ಯಾಂನಲ್ಲಿ ನಿರ್ವಹಣೆ ಕೆಲಸ ಇರುವುದರಿಂದ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಎರಡು ದಿನ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆಗಳು ಸೇರಿದಂತೆ ಕೆಲವು ಅಪಾರ್ಟ್ ಮೆಂಟ್ ಗಳಿಗೆ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಖಾಸಗಿ ಟ್ಯಾಂಕರ್ ನೀರನ್ನೇ ಹೆಚ್ಚಾಗಿ ನಂಬುವಂತಹ ಪರಿಸ್ಥಿತಿ ಬಂದಿದೆ. ಅಲ್ಲದೇ ಹೊಟೇಲ್, ಕ್ಯಾಂಟೀನ್, ಲಾಡ್ಜ್ ,ಕೈಗಾರಿಕೆ ಘಟಕ, ಮೀನುಗಾರಿಕೆ ವಲಯ ಎಲ್ಲೆಡೆ ನೀರಿನ ಕೊರತೆ ಎದುರಾಗಿದ್ದು, ಮೇ ಅಂತ್ಯದ ಒಳಗೆ ಮುಂಗಾರು ಪೂರ್ವ ಮಳೆಯಾಗದಿದ್ದರೆ, ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.