ಉಡುಪಿ: ಉಡುಪಿಯ ಸೈಂಟ್ ಸಿಸಿಲಿಸ್ ವಿದ್ಯಾಸಂಸ್ಥೆ, ಬ್ರಹ್ಮಗಿರಿಯಲ್ಲಿ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆ -2023 ಕ್ಕೆ ಸಂಬಂಧಿಸಿದಂತೆ, ಮತ ಎಣಿಕೆ ಕಾರ್ಯವು ಮೇ 13 ರಂದು ನಡೆಯಲಿದೆ. ಮತಎಣಿಕೆ ಕಾರ್ಯವು ಸುಸೂತ್ರವಾಗಿ ನಡೆಯಲು ಹಾಗೂ ನಂತರ ಕಾನೂನು ಸುವ್ಯವಸ್ಥೆಯನ್ನು ಕಾಯ್ದಕೊಂಡು, ಶಾಂತಿಯನ್ನು ಕಾಪಾಡುವ ಸಲುವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಕಾನೂನು ಮತ್ತು ಸುವ್ಯವಸ್ಥೆ, ಶಾಂತಿಪಾಲನೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ 1973 ರ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 (1) ರನ್ವಯ ಜಿಲ್ಲೆಯಾದ್ಯಂತ ಮೇ 13 ರಂದು ಬೆಳಿಗ್ಗೆ 5 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.
ಷರತ್ತುಗಳು
1. ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ, ಸಾರ್ವಜನಿಕರು 5 ಜನರು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಅಥವಾ ತಿರುಗುವುದನ್ನು ನಿಷೇಧಿಸಿದೆ.
2. ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಕರಾಳೋತ್ಸವ, ಪ್ರತಿಭಟನಾ ಮೆರವಣಿಗೆ ಹಾಗೂ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸಭೆ ಸಮಾರಂಭಗಳನ್ನು ಹಾಗೂ ಯಾವುದೇ ರೀತಿಯ ಘೋಷಣೆ ಕೂಗುವುದನ್ನು ನಿಷೇಧಿಸಿದೆ.
3. ಚುನಾವಣೆಯ ಮತ ಎಣಿಕೆ ಫಲಿತಾಂಶದ ವಿಜಯೋತ್ಸವದ ಸಮಯದಲ್ಲಿ ಪಟಾಕಿ/ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿದೆ.
4. ಈ ಅವಧಿಯಲ್ಲಿ ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಜಿ, ಗಧೆ, ಕೋಲು, ಚೂರಿ, ದೊಣ್ಣೆ, ಲಾಠಿಗಳನ್ನು ಅಥವಾ ದೈಹಿಕ ಹಿಂಸೆಗೆ ಕಾರಣವಾಗುವ ಅಥವಾ ಮಾರಕವಾಗುವ ಇನ್ನಾವುದೇ ವಸ್ತುಗಳನ್ನು ಧರಿಸುವುದನ್ನು ಮತ್ತು ಯಾವುದೇ ಕಾರಕ ಯಾ ಸ್ಫೋಟಕ ವಸ್ತುಗಳು/ಪಟಾಕಿ | ಸಿಡಿಮದ್ದು ಹೊಂದುವುದನ್ನು ನಿಷೇಧಿಸಿದೆ.
5. ಯಾವುದೇ ಸಾರ್ವಜನಿಕ ಪ್ರದೇಶದಲ್ಲಿ ಕಲ್ಲುಗಳನ್ನು ಒಟ್ಟುಗೂಡಿಸುವುದು, ಯಾವುದೇ ಕ್ಷಿಪಣಿಗಳು ಅಥವಾ ಕ್ಷಿಪಣಿಯಾಗಿ ಉಪಯೋಗಿಸಲ್ಪಡುವ ಇತರ ಆಯುಧಗಳು ಮತ್ತು ಸಾಧನ ಸಾಮಾಗ್ರಿಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ.
6. ಈ ಅವಧಿಯಲ್ಲಿ ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು, ಪದ ಹಾಡುವುದು, ಗಾಯನ ಮಾಡುವುದು, ಆವೇಶ ಭಾಷಣ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು, ಚೇಷ್ಟೆ ಮಾಡುವುದು, ಚಿತ್ರಗಳ ಪ್ರದರ್ಶನ ತಯಾರಿಸುವುದು ಯಾ ಪುಸಾರ ಮಾಡುವುದು, ಗುರುತುಗಳು, ಪ್ರಕಟಣಾ ಪತ್ರಿಕೆಗಳ ಯಾ ಇತರ ಯಾವುದೇ ವಸ್ತುಗಳ ಪ್ರದರ್ಶನದಿಂದ ಸಭ್ಯತನ, ಸದಾಚಾರ, ಸಾರ್ವಜನಿಕ ಹಿತ ಯಾ ಭದ್ರತೆ ಶಿಥಿಲಗೊಳ್ಳುವಂತಹ ಯಾ ಸರಕಾರವನ್ನು ಕೆದಕುವ ಯಾ ಅಪರಾಧವೆಸಗುವರೇ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ.
7. ಈ ನಿಷೇದಾಜ್ಞೆ ಆದೇಶವು ಸರಕಾರದಿಂದ ಯಾ ಸರಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಮತ್ತು ಸರಕಾರಿ ನೌಕರರು ಕರ್ತವ್ಯ ನಿರ್ವಹಣೆಯ ವೇಳೆ ಲಾಠಿಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ.
8. ಈ ನಿಷೇಧಾಜ್ಞೆ ಆದೇಶವು ಕೆಳಗೆ ಸಹಿ ಮಾಡಿರುವವರ ಅಥವಾ ಉಪವಿಭಾಗದ ದಂಡಾಧಿಕಾರಿ, ತಾಲೂಕು ದಂಡಾಧಿಕಾರಿಯವರ ಪೂರ್ವಾನುಮತಿಯಂತೆ ನಡೆಯುವ ಕಾರ್ಯಕ್ರಮಗಳಿಗೆ ಹಾಗೂ ಶವ ಮೆರವಣಿಗೆ, ಮದುವೆ ಮೆರವಣಿಗೆ ಮತ್ತು ಧಾರ್ಮಿಕ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ.