ಕಾಪು: ಭಾರೀ ಗಾಳಿ ಮಳೆಯ ಪರಿಣಾಮ ಕಾಪು – ಶಿರ್ವ ರಸ್ತೆಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಮರ ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಲ್ಲಾರು ಚಂದ್ರನಗರದ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಕಾಪುವಿನಿಂದ ಪಾದೂರಿಗೆ ತೆರಳು ತ್ತಿದ್ದ ರಿಕ್ಷಾದ ಮೇಲೆ ಧೂಪದ ಮರ ಉರುಳಿ ಬಿದ್ದಿದ್ದು ಇಬ್ಬರು ಪ್ರಯಾ ಣಿಕರು ರಿಕ್ಷಾದೊಳಗೆ ಸಿಲುಕಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪಾದೂರು ಕೂರಾಲು ರೈಸ್‌ಮಿಲ್ ಬಳಿಯ ನಿವಾಸಿ ಪುಷ್ಪಾ ಕುಲಾಲ್ (45) ಮತ್ತು ಕಳತ್ತೂರು ನಿವಾಸಿ ಕೃಷ್ಣ (48) ಮೃತಪಟ್ಟವರು. ರಿಕ್ಷಾ ಚಾಲಕ ಶರೀಫ್ ಪವಾಡ ಸದೃಶ ರೀತಿಯಲ್ಲಿ ರಿಕ್ಷಾದಿಂದ ಜಿಗಿದು ಪಾರಾಗಿದ್ದಾರೆ.
ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾ ಗಿದ್ದು ಮರವನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಪೊಲೀಸ್, ಮೆಸ್ಕಾಂ, ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳ ಸಹಿತ ನೂರಾರು ಮಂದಿ ಜಾತಿ ಮತ ಮರೆತು ರಕ್ಷಣ ಕಾರ್ಯದಲ್ಲಿ ತೊಡಗಿದ್ದು ಜೆಸಿಬಿ, ಕ್ರೇನ್ ಸಹಾಯದಿಂದ ಒಂದೂವರೆ ಗಂಟೆ ಪರಿಶ್ರಮದ ಬಳಿಕ ಮರವನ್ನು ಬದಿಗೆ ಸರಿಸಲಾಯಿತು. ರಿಕ್ಷಾದೊಳಗೆ ಸಿಲುಕಿದ್ದವರು ಅಷ್ಟರಲ್ಲೇ ಮೃತ ಪಟ್ಟಿದ್ದರು. ಮೃತದೇಹಗಳನ್ನು ಆ್ಯಂಬುಲೆನ್ಸ್ ಮೂಲಕ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಸ್ಥಳದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದು ಜನರನ್ನು ನಿಯಂತ್ರಿಸಲು ಕಾಪು ಎಸ್‌ಐ ಸುಮಾ ಬಿ., ಕ್ರೈಂ ಎಸ್‌ಐ ಭರತೇಶ ಕಂಕಣವಾಡಿ ಸಹಿತ ಪೊಲೀಸ್ ಅಧಿಕಾರಿಗಳು ಮತ್ತು ಸಿಬಂದಿ ಪರದಾಡುವಂತಾಯಿತು. ಜನ ಮತ್ತೆ ಮತ್ತೆ ಘಟನ ಸ್ಥಳದಲ್ಲಿ ಜಮಾಯಿಸಿದ ಪರಿಣಾಮ ರಕ್ಷಣ ಕಾರ್ಯಾಚರಣೆ ನಡೆಸಲೂ ತೊಂದರೆಯಾಗಿದ್ದು, ಜನರನ್ನು ನಿಯಂತ್ರಿಸಲು ಸ್ಥಳೀಯರು ಪೊಲೀಸರೊಂದಿಗೆ ಕೈ ಜೋಡಿಸಿದ್ದರು. ರಸ್ತೆ ಸಂಚಾರವೂ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ವಾಹನಗಳಿಗೆ ಬದಲಿ ರಸ್ತೆ ಮೂಲಕ ಸಂಚರಿಸಲು ಅನುವು ಮಾಡಿಕೊಡಲಾಯಿತು.
ಮರ ಬೀಳುವಾಗ ಮತ್ತೂಂದು ರಿಕ್ಷಾ ಸ್ಪಲ್ಪದರಲ್ಲೇ ಪಾರಾಗಿದ್ದು ಚಾಲಕನ ಸಕಾಲಿಕ ಕ್ರಮದಿಂದ ಎಲ್ಲರೂ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ಮರ ಬೀಳುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ರಿಕ್ಷಾವನ್ನು ಮುಂದಕ್ಕೆ ಚಲಾಯಿಸಲು ಯತ್ನಿಸಿದಾಗ ರಿಕ್ಷಾ ಮಗುಚಿ ಬಿದ್ದಿತು. ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮೃತದೇಹಗಳನ್ನು ಸಾಗಿಸಲು ಕಾಪು ಸರಕಾರಿ ಆಸ್ಪತ್ರೆಯ ಆ್ಯಂಬುಲೆನ್ಸ್ ಜತೆಗೆ ಎಸ್‌ಡಿಪಿಐ ಆ್ಯಂಬ್ಯುಲೆನ್ಸ್ ಅನ್ನು ಬಳಸಲಾಯಿತು.
ಪುಷ್ಪಾ ಕುಲಾಲ್ ಕಾಪುವಿನಿಂದ ಮನೆಗೆ ತೆರಳುತ್ತಿದ್ದರು. ಅವರು ಪತಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಯಲ್ಲಿ ಶಾಶ್ವತ ಅಂಗೈವಕಲ್ಯದಿಂದ ಬಳಲುತ್ತಿರುವ ಸಹೋದರನೊಬ್ಬನಿದ್ದು ಅವರ ಸಂಪೂರ್ಣ ಆರೈಕೆಯ ಜವಾಬ್ದಾರಿಯನ್ನು ಪುಷ್ಪಾ ಅವರೇ ನಿರ್ವಹಿಸುತ್ತಿದ್ದರು. ತಾಯಿಯಂತೆ ಆರೈಕೆ ಮಾಡುತ್ತಿದ್ದ ಸಹೋದರಿಯನ್ನು ಕಳೆದುಕೊಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಕೃಷ್ಣ ಮುಖಾರಿ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.