ಉಡುಪಿ: ಜಿಲ್ಲೆಯಾದ್ಯಂತ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಿರ್ಮಿಸಿದ್ದ ಚೆಕ್‌ಪೋಸ್ಟ್‌ಗಳನ್ನು ತೆರವು ಮಾಡಲಾಗಿದೆ.
ಚುನಾವಣೆ ನೀತಿಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಶಿರೂರು, ಕೊಲ್ಲೂರು, ಹೊಸಂಗಡಿ, ಕುಂದಾಪುರದ ಹಾಲಾಡಿ, ಕಂಡ್ಲೂರು, ತೆಕ್ಕಟ್ಟೆ, ಉಡುಪಿಯ ನೇಜಾರು, ಬಲಾೖಪಾದೆ ಉದ್ಯಾವರ, ಅಲೆವೂರು, ಕಾಪುವಿನ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರು, ಕಾರ್ಕಳದ ನಾಡಾ³ಲು, ಸೋಮೇಶ್ವರ, ಸಾಣೂರು, ಮುದರಂಗಡಿ, ಈದು, ಹೊಸ್ಮಾರು, ಬೆಳ್ಮಣ್ ಭಾಗದಲ್ಲಿರುವ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು.
ಜತೆಗೆ ಅರೆಸೇನಾಪಡೆಯ ಸುಮಾರು 19 ಕಂಪೆನಿಗಳು ಆಗಮಿಸಿದ್ದು, 2 ಸಾವಿರದಷ್ಟು ಮಂದಿ ಸಿಬಂದಿ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದರು. ಜತೆಗೆ ಮಹಾರಾಷ್ಟ್ರ ಹಾಗೂ ತಮಿಳುನಾಡು ಪೊಲೀಸರೂ ಆಗಮಿಸಿದ್ದರು.
ಮತ ಎಣಿಕೆ ನಡೆಯುವ ಸ್ಟ್ರಾಂಗ್ ರೂಂ ಗೆ 2 ಕಂಪೆನಿಗಳ ಸುಮಾರು 200 ರಷ್ಟು ಮಂದಿ ಸಿಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜತೆಗೆ ಜಿಲ್ಲಾ ಪೊಲೀಸರೂ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತದಾನ ದಿನವಾದ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ಉಡುಪಿ, ಕಾರ್ಕಳ, ಕುಂದಾಪುರ, ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಲಿಂಗಪ್ಪ ಅವರೂ ಉಡುಪಿ, ಕುಂದಾಪುರ, ಬೈಂದೂರು ಭಾಗದಲ್ಲಿರುವ ಮತಗಟ್ಟೆಗಳಿಗೆ ಭೇಟಿ ನೀಡಿದರು.