ಬೆಳ್ತಂಗಡಿ:ಕೊಕ್ಕಡ ಗ್ರಾಮದ ಸರಕಾರಿ ಪ್ರೌಢ ಶಾಲೆ ಸಹಿತ ದ.ಕ.ಜಿಲ್ಲೆಯ ವಿವಿಧ ಶಾಲೆಗಳಿಂದ ಕಳ್ಳತನವಾದ ಘಟನೆ ಸಂಬಂಧ ಧರ್ಮಸ್ಥಳ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಕಳವು ಮಾಡಿದ್ದ ಸುಮಾರು 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಬ್ಯಾಟರಿ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಗಳನ್ನು ಕುಟ್ರಪಾಡಿ ನಿವಾಸಿ ರಕ್ಷಿತ್ ಡಿ (24), ಕಡಬ ಮೀನಾಡಿ ನಿವಾಸಿ ತೀರ್ಥೇಶ್ ಎಂ (29), ಕಡಬ ಉರುಂಬಿ ನಿವಾಸಿ ಯಜ್ಞೇಶ್ ಯು ಕೆ (30), ರೋಹಿತ್ ಎಚ್ ಶೆಟ್ಟಿ (23) ಎಂದು ಗುರುತಿಸಲಾಗಿದೆ.
ಮುಖ್ಯೋಪಾಧ್ಯಾಯ ಹಳ್ಳಿಕೇರಿ ಪ್ರಭಾಕರ ನಾಯಕ್ ಅವರು ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನನ್ವಯ ಕೊಕ್ಕಡ ಸರಕಾರಿ ಶಾಲೆಯಲ್ಲಿದ್ದ 3.2 ಲಕ್ಷ ಮೌಲ್ಯದ ಎಂಟು ಬ್ಯಾಟರಿಗಳನ್ನು ಕಳವು ಮಾಡಲಾಗಿದ್ದು, ಸಬ್ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತು ರೇಣುಕಾ ಅವರನ್ನೊಳಗೊಂಡ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಉಪ್ಪಿನಂಗಡಿ ಪೊಲೀಸ್ ವ್ಯಾಪ್ತಿಯ ನಾಲ್ಕು ಸರ್ಕಾರಿ ಶಾಲೆಗಳು, ಸುಬ್ರಹ್ಮಣ್ಯ ವ್ಯಾಪ್ತಿಯ ಎರಡು ಸರ್ಕಾರಿ ಶಾಲೆಗಳು, ಪುತ್ತೂರು ಪೇಟೆ, ಬಂಟ್ವಾಳ ಮತ್ತು ಧರ್ಮಸ್ಥಳ ಪೊಲೀಸ್ ವ್ಯಾಪ್ತಿಯ ತಲಾ ಒಂದು ಸರ್ಕಾರಿ ಶಾಲೆಗಳಲ್ಲಿ ಬ್ಯಾಟರಿಗಳನ್ನು ಕಳವು ಮಾಡಿದ್ದರು. ಒಂಬತ್ತು ಸರ್ಕಾರಿ ಶಾಲೆಗಳಿಂದ 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಬ್ಯಾಟರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳ್ಳತನದ ಸಂಬಂಧ ಬಳಸಲಾದ ಕಾರನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.