ಉಡುಪಿ : ಮೇ 3ರಂದು ಬುಧವಾರ ಮಂಗಳೂರು ನಗರದ ಹೊರವಲಯದಲ್ಲಿರುವ ಮುಲ್ಕಿಯ ಕೊಲ್ನಾಡು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ (NH 66) ಸಂಚಾರ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಭದ್ರತೆಯ ಹಿತದೃಷ್ಟಿಯಿಂದ ಮೇ 3 ರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ. ವಾಹನಗಳು ಪರ್ಯಾಯ ರಸ್ತೆಯನ್ನು ಅವಲಂಬಿಸಲು ಸೂಚನೆ ನೀಡಲಾಗಿದೆ
ಪ್ರಧಾನ ಮಂತ್ರಿಯವರು ಮೇ 3 ರ ಬೆಳಿಗ್ಗೆ 10.30 ಕ್ಕೆ ಮೈದಾನಕ್ಕೆ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಹಾಗಾಗಿ ರಾಷ್ಟ್ರೀಯ ಹೆದ್ದಾರಿಯ ಹಳೆಯಂಗಡಿಯಿಂದ ಕಾರ್ನಾಡ್ ಬೈಪಾಸ್ವರೆಗಿನ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಪ್ರಧಾನಿ ಕಾರ್ಯಕ್ರಮದ ಹಿನ್ನೆಲೆ ರಸ್ತೆ ಸಂಚಾರದಲ್ಲಿ ಭಾರೀ ಮಾರ್ಪಾಡು ಮಾಡಲಾಗಿದೆ. ಅದರಂತೆ ಸಾರ್ವಜನಿಕ ಓಡಾಟದ ಬಸ್ ಗಳು ಹಾಗೂ ಇತರೆ ವಾಹನಗಳು ಪರ್ಯಾಯ ರಸ್ತೆಯನ್ನು ಅವಲಂಬಿಸಬೇಕಾಗುತ್ತದೆ.
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ ರಸ್ತೆಯಾಗಿ ಕಟೀಲು, ಬಜ್ಪೆ, ಕಾವೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸಬೇಕಿದೆ.
ಮಂಗಳೂರು ಕಡೆಯಿಂದ ಉಡುಪಿಗೆ ತೆರಳುವ ವಾಹನಗಳು ಕೆಪಿಟಿ ಜಂಕ್ಷನ್ ನಿಂದ ಬಲಕ್ಕೆ ಬೋಂದೆಲ್, ಕಾವೂರು, ಬಜ್ಪೆ, ಕಟೀಲು, ಕಿನ್ನಿಗೋಳಿ, ಮುಲ್ಕಿ ಕಡೆಗೆ ಅಥವಾ ಕೂಳೂರು ಜಂಕ್ಷನ್ ನಿಂದ ಕಾವೂರು, ಬಜ್ಪೆ, ಕಟೀಲು, ಕಿನ್ನಿಗೋಳಿ, ಮುಲ್ಕಿ ಕಡೆಗೆ ಸಂಚರಿಸಿ ಬಳಿಕ ರಾ.ಹೆ. 66 ರ ಮೂಲಕ ಉಡುಪಿಗೆ ತೆರಳಲು ಸೂಚನೆ ನೀಡಲಾಗಿದೆ.
ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ತೆರಳುವ ವಾಹನಗಳು ಹಳೆಯಂಗಡಿಯಿಂದ ಬಲಕ್ಕೆ ತಿರುಗಿ ಪಕ್ಷಿಕೆರೆ, ಎಸ್. ಕೋಡಿ ಮಾರ್ಗವಾಗಿ ಮುಲ್ಕಿ ತಲುಪಿ ರಾ.ಹೆದ್ದಾರಿ ಮೂಲಕ ಉಡುಪಿ ಕಡೆ ಸಂಚರಿಸಲು ಸೂಚನೆ ನೀಡಲಾಗಿದೆ.