ಬೆಂಗಳೂರು: ಏಪ್ರಿಲ್ 14:ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹಲವು ದಿನಗಳ ಕಾಲ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ರಾತ್ರಿ 2.30ರ ಸುಮಾರಿಗೆ ಬ್ಯಾಂಕ್ ಜನಾರ್ಧನ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ.
1949ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದರು. 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ ಅವರು ನಟಿಸಿದರು. 2016ರಿಂದ ಈಚೆಗೆ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿರಲಿಲ್ಲ. 2022ರ ‘ಮಠ’ ಹಾಗೂ 2023ರ ‘ಉಂಡೇನಾಮ’ ಚಿತ್ರದಲ್ಲಿ ಅವರು ನಟಿಸಿದ್ದರು.
ಜನಾರ್ಧನ್ ಅವರಿಗೆ ಬ್ಯಾಂಕ್ ಜನಾರ್ಧನ್ ಎಂದು ಹೆಸರು ಬರಲೂ ಕೂಡ ಕಾರಣವಿದೆ. ಜನಾರ್ಧನ್ ಅವರು ಚಿತ್ರದುರ್ಗದ ಸಮೀಪದ ಹೊಳಲ್ಕೆರೆ ಬಳಿಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಕಲೆಯ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, ನಾಟಕಗಳನ್ನು ಮಾಡಿಕೊಂಡಿದ್ದರು. ಅವರ ನಾಟಕವನ್ನು ನೋಡಿ ಧೀರೇಂದ್ರ ಗೋಪಾಲ್ ಅವರು ಇಂಪ್ರೆಸ್ ಆದರು. ಬೆಂಗಳೂರಿಗೆ ಬರುವಂತೆ ಅವರು ಹೇಳಿದ್ದರು.