ಸುಳ್ಯ : ಏಪ್ರಿಲ್ 06 :ಸುಳ್ಯ ಸಮೀಪದ ಮಾಣಿ-ಮೈಸೂರು ಹೆದ್ದಾರಿಯಲ್ಲಿ ಆರು ಯುವಕರ ಗುಂಪೊಂದು ಚಲಿಸುತ್ತಿದ್ದ ಕಾರಿನ ಮೇಲೆ ಅಪಾಯಕಾರಿ ಸ್ಟಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ದುಸ್ಸಾಹಸವನ್ನು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ
ವಿಡಿಯೋದಲ್ಲಿ ಇಬ್ಬರು ಯುವಕರು ವೇಗವಾಗಿ ಚಲಿಸುತ್ತಿರುವ ಕಾರಿನ ಸನ್‌ರೂಫ್‌ನಿಂದ ಹೊರಗೆ ನಿಂತಿದ್ದರೆ, ಇಬ್ಬರು ಹಿಂಬದಿಯ ಬಾಗಿಲುಗಳಿಂದ ಹೊರಗೆ ನೇತಾಡುತ್ತಿರುವುದು ಕಾಣಬಹುದು. ಮತ್ತಿಬ್ಬರು ಯುವಕರು ಮುಂಭಾಗದ ಪ್ರಯಾಣಿಕರ ಬಾಗಿಲುಗಳಿಂದ ಹೊರಬರುತ್ತಿರುವುದು ಕಂಡುಬರುತ್ತದೆ. ಈ ಎಲ್ಲಾ ಯುವಕರು ರಸ್ತೆ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ತಮ್ಮ ಜೀವದ ಜೊತೆಗೆ ಇತರರ ಜೀವಕ್ಕೂ ಅಪಾಯವನ್ನುಂಟು ಮಾಡಿದ್ದಾರೆ.
ಕ್ರೆಟಾ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣ ಮಾಡಿದ್ದು, ಕಾರು ಅತೀ ವೇಗವಾಗಿ ಹೋಗುತ್ತಿರುವಾಗಲೇ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ಪುಂಡಾಟ ಮಾಡಿದ್ದು, ಇದನ್ನು ಮತ್ತೊಂದು ವಾಹನ ಸವಾರರು ವಿಡಿಯೋ ಮಾಡಿದ್ದು, ವಿಡಿಯೋ ವೈರಲ್ ಆಗಿತ್ತು
ಇದೀಗ ಸುಳ್ಯ ಪೊಲೀಸರು, BNS ಆಕ್ಟ್ 281 IMV,184 ಸಕ್ಷನ್ ಅಡಿಯಲ್ಲಿ ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದು, ಯುವಕರ ಪತ್ತೆಗೆ ಕಾರ್ಯಚರಣೆ ನಡೆಸಿದ್ದಾರೆ. ಆದ್ರೆ, ಎಫ್ಐಆರ್ ದಾಖಲಾಗುತ್ತಿದ್ದಂತೆಯೆ ಯುವಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ