ಬೆಂಗಳೂರು :ಮಾರ್ಚ್ 26: ಏಪ್ರಿಲ್ 1 ರಿಂದ ರಾಜ್ಯದಾದ್ಯಂತ ಟೋಲ್ ಸುಂಕ ಶೇ 3-5 ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಇದರೊಂದಿಗೆ ಕರ್ನಾಟಕದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದಂತಾಗಲಿದೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ ಹೆಚ್ಚಳಕ್ಕೆ ಎನ್‌ಎಚ್‌ಎಐ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಟೋಲ್ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ. ಗರಿಷ್ಠ ಶೇ 5 ರಷ್ಟು ಮತ್ತು ಕನಿಷ್ಠ ಶೇ 3 ರಷ್ಟು ಹೆಚ್ಚಳವಾಗಲಿದೆ ಎಂದು ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಸುಮಾರು 66 ಟೋಲ್ ಪ್ಲಾಜಾಗಳಿವೆ. ಟೋಲ್ ಸುಂಕ ಹೆಚ್ಚಾಗುವ ಟೋಲ್ ಪ್ಲಾಜಾಗಳಲ್ಲಿ ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಟೋಲ್ ಪ್ಲಾಜಾಗಳು ಸೇರಿವೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಸ್ತೆ ಬಳಕೆದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19 ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು.